ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ನಡುವೆಯೇ ಭಾರತ ಕೊಲಂಬೋಗೆ ಇಂಧನ ಪೂರೈಕೆ ಮಾಡಿದ್ದು, ಇದರಿಂದಾಗಿ ಲಂಕಾದ ದೇಶೀಯ ಆರ್ಥಿಕ ಸ್ಥಿತಿ ಸ್ಥಿರವಾಗಿರಿಸಲು ನೆರವಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಲಡಾಖ್ ಬಳಿಯ ಭಾರತೀಯ ವಿದ್ಯುತ್ ರವಾನೆ ಕೇಂದ್ರಗಳನ್ನು ಗುರಿಯಾಗಿಸಿದ ಚೀನಾ ಹ್ಯಾಕರ್ ಗಳು!
ಭಾರತದ ಕಳೆದ 24ಗಂಟೆಗಳ ಅವಧಿಯಲ್ಲಿ 36,000 ಮೆಟ್ರಿಕ್ ಟನ್ ಪೆಟ್ರೋಲ್, 40,000 ಮೆಟ್ರಿಕ್ ಟನ್ ಗಳಷ್ಟು ಡೀಸೆಲ್ ಅನ್ನು ಶ್ರೀಲಂಕಾಕ್ಕೆ ಸರಬರಾಜು ಮಾಡಿದೆ. ಭಾರತ ಒಂದೇ ದಿನದಲ್ಲಿ 76,000 ಟನ್ ಇಂಧನವನ್ನು ಪೂರೈಕೆ ಮಾಡಿದೆ. ಈವರೆಗೆ ಭಾರತ ಶ್ರೀಲಂಕಾಕ್ಕೆ ಒಟ್ಟು 2,70,000 ಟನ್ ಗಳಷ್ಟು ಇಂಧನ ಸರಬರಾಜು ಮಾಡಿರುವುದಾಗಿ ವರದಿ ವಿವರಿಸಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಬೇಕೆಂದು ತೀವ್ರ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದೆಡೆ ರಾಜಕೀಯ ಅಸ್ಥಿರತೆ, ಆಹಾರ ಕೊರತೆಯಿಂದ ಜನರು ಪರದಾಡುವಂತಾಗಿದೆ.
ದ್ವೀಪರಾಷ್ಟ್ರ ಶ್ರಿಲಂಕಾದಲ್ಲಿ 22 ಮಿಲಿಯನ್ ಜನರು ತೀವ್ರ ಆಹಾರ ಕೊರತೆ, ಇಂಧನ ಹಾಗೂ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಲಂಕಾದಲ್ಲಿ ಹಾಲು, ಅಕ್ಕಿ, ಸಕ್ಕರೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. 1948ರಲ್ಲಿ ಸ್ವತಂತ್ರಗೊಂಡ ನಂತರ ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿ ತೀವ್ರ ಆರ್ಥಿಕ ಬಿಕ್ಕಟ್ಟು, ಆಹಾರ ಕೊರತೆ ಎದುರಿಸುವಂತಾಗಿದೆ ಎಂದು ವರದಿ ವಿವರಿಸಿದೆ.
ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದರು ಕೂಡಾ ಶ್ರೀಲಂಕಾ ಸರ್ಕಾರ ಬಹುಮತ ಕಳೆದುಕೊಂಡಿದ್ದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದು ಗೋಟಬಯ ರಾಜಪಕ್ಸ ಪಟ್ಟು ಹಿಡಿದಿರುವ ಪರಿಣಾಮ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ.