ದಾವಣಗೆರೆ: ಭ್ರಷ್ಟಾಚಾರಮುಕ್ತ, ಸ್ವಚ್ಛ ಹಾಗೂ ಸಧೃಢ, ಸಶಕ್ತ ಭಾರತ ನಿರ್ಮಾಣಕ್ಕೆ ಆರ್ಯವೈಶ್ಯ ಸಮಾಜ ವಿದ್ಯಾರ್ಥಗಳು ಮುಂದಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದರು.
ಭಾನುವಾರ ತ್ರಿಶೂಲ್ ಕಲಾ ಭವನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಜಿಲ್ಲಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ 8ನೇ ಪ್ರತಿಭೋತ್ಸವ ಮತ್ತು ವಿದ್ಯಾರ್ಥಿಮಿತ್ರ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಆರ್ಯವೈಶ್ಯ ಸಮಾಜ ಒಳಗೊಂಡಂತೆ ಎಲ್ಲ ಸಮಾಜದ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗೆ ಮೂಲ ಕಾರಣ ತುಂಬು ತುಳುಕುತ್ತಿರುವ ಭ್ರಷ್ಟಾಚಾರ. ಆರ್ಯವೈಶ್ಯ ಸಮಾಜದ ವಿದ್ಯಾರ್ಥಿಗಳು, ಪ್ರತಿಭಾವಂತರು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು
ಎಂದು ತಿಳಿಸಿದರು.
ಸಾವಿರಾರು ವರ್ಷಗಳ ಹಿಂದೆಯೇ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಅಧ್ಯಯನಕ್ಕೆಂದು ಬರುತ್ತಿದ್ದರು. ಭಾರತ ಬಡವರ, ಏನೂ ಇಲ್ಲದವರ ದೇಶ ಎಂಬುದಾಗಿ ಏನೋ ಕೊಡಲಿಕ್ಕೆ ಬರುತ್ತಿರಲಿಲ್ಲ. ಭಾರತ ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೊಂದು ಸಂಪತ್ತಿನಿಂದ ಕೂಡಿತ್ತು. ಅಂತಹ ದೇಶದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ಶೌಚಾಲಯ ಕಟ್ಟಿಸಿಕೊಳ್ಳಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂಬ ಮನವಿ ಮಾಡುತ್ತಿದ್ದಾರೆ. ಅವರ ಕರೆಗೆ ಅನುಗುಣವಾಗಿ ನಾವೆಲ್ಲರೂ ಸ್ವತ್ಛ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ಆರ್ಯವೈಶ್ಯ ಸಮಾಜದ ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ| ಕಲಾಂರವರು 2020ರ ವೇಳೆಗೆ ಭಾರತ ಜಗತ್ತಿನ ಅಗ್ರಗಣ್ಯ ದೇಶ ಆಗಬೇಕು ಎಂಬ ಕನಸಿನ ಬಗ್ಗೆ ಸದಾ ಪ್ರಸ್ತಾಪಿಸುತ್ತಿದ್ದರು. ವಿದ್ಯಾರ್ಥಿ ಸಮುದಾಯ ಕಲಾಂರವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಸಶಕ್ತ ಭಾರತವ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನದಲ್ಲಿದ್ದ ಭಾರತದ ತಂತ್ರಜ್ಞಾನ ಈಗಲೂ ಸವಾಲಿನಿದ್ದಾಗಿದೆ. ದೆಹಲಿಯಲ್ಲಿನ ಅಶೋಕ ಸ್ತಂಭ ಪ್ರತಿಷ್ಠಾಪಿಸಿ 800-1 ಸಾವಿರ ವರ್ಷವೇ ಆಗಿರಬಹುದು. ಆದರೆ, ಇಂದಿಗೂ ತುಕ್ಕು ಹಿಡಿದಿಲ್ಲ. ತುಕ್ಕು ಹಿಡಿಯದಂತ ಕಬ್ಬಿಣ ಕಂಡು ಹಿಡಿದಿರುವ ಭಾರತ ಶಿಕ್ಷಣ ಮಾತ್ರವಲ್ಲ ಗಣಿತ, ರಾಸಾಯನಶಾಸ್ತ್ರ, ಖಗೋಳಶಾಸ್ತ್ರ ಒಳಗೊಂಡಂತೆ ಅನೇಕ ಕ್ಷೇತ್ರದಲ್ಲಿ ಶ್ರೀಮಂತವಾಗಿತ್ತು. ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿದಾಗ ಒಂದು ತಿಂಗಳು ಕಾಲ ಉರಿಯುವಷ್ಟು ಪುಸ್ತಕ ಭಂಡಾರ ಅಲ್ಲಿತ್ತು ಎಂದು ತಿಳಿಸಿದರು.
ಅಹಿಂಸಾ ಮಾರ್ಗದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದನ್ನ ಸಾಧಿಸಿ ತೋರಿಸಿದ ಜಗನ್ಮಾತೆ ವಾಸವಿದೇವಿ, ರಾಷ್ಟ್ರಪತಿ ಮಹಾತ್ಮಗಾಂಧಿಯವರಂತಹ ಶ್ರೀಮಂತಿಕೆ ಹೊಂದಿದ್ದರೂ ರಾಜಕೀಯ ಕಾರಣಕ್ಕೆ ಸಾವಿರಾರು ವರ್ಷಗಳ ಕಾಲ ಗುಲಾಮಗಿರಿ ಅನುಭವಿಸಿ, ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಜೀವನವ ನಾವೇ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರು ಸ್ವಾಭಿಮಾನದಿಂದ ಬಾಳಬೇಕು ಎಂದು ತಿಳಿಸಿದರು. ವಣಿಕ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿದ್ದ ಆರ್ಯವೈಶ್ಯ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. ಅಂತಹ ಪ್ರತಿಭಾವಂತರಿಗೆ ಆರ್ಯವೈಶ್ಯ ಮಹಾಸಭಾ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡುತ್ತಿದೆ. ಮಹಾಸಭಾದ ಪ್ರೋತ್ಸಾಹ, ಸಹಕಾರ ಬಳಸಿಕೊಂಡು ಸಮಾಜದ ವಿದ್ಯಾರ್ಥಿಗಳು ಎಲ್ಲ ಸವಾಲು ಮೆಟ್ಟಿ ನಿಲ್ಲುವ, ಸಶಕ್ತ ಭಾರತ ನಿರ್ಮಾಣ ಮಾಡಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆರ್ಯವೈಶ್ಯ ಮಹಾಸಭಾದ ರಾಜ್ಯ ಅಧ್ಯಕ್ಷ ಆರ್.ಪಿ. ರವಿಶಂಕರ್, ಸಮಾಜವನ್ನು ಜಾತಿ ಪಟ್ಟಿಗೆ ಸೇರಿಸಲಿಕ್ಕೂ ಆಗದ ಯಾವ ಸರ್ಕಾರಗಳು ಸಹ ಆರ್ಯವೈಶ್ಯ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕೊಟ್ಟಿಲ್ಲ. ಕೊಡುವುದೂ ಇಲ್ಲ. ಸ್ವಾಭಿಮಾನದ ಜೀವನ ನಡೆಸುವ ಸಂದೇಶ ನೀಡಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಂಶದವರಾದ ಆರ್ಯವೈಶ್ಯ ಸಮಾಜದವರು ಮೀಸಲಾತಿ ಇತರೆ ಸೌಲಭ್ಯಕ್ಕೆ ಭಿಕ್ಷೆ ಮಾಡುವ ಬದಲಿಗೆ ಭಿಮಾನದಿಂದ ಬಾಳಬೇಕು ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಜಿ. ಶ್ರೀನಿವಾಸಮೂರ್ತಿ, ಆರ್.ಎಲ್. ಪ್ರಭಾಕರ್, ಎಸ್.ಆರ್. ಶ್ರೀಧರಮೂರ್ತಿ, ಎಚ್.ಜೆ. ಹನುಮಂತಯ್ಯ, ಅನಂತರಾಮಶೆಟ್ಟಿ, ಅಶ್ವತ್‌ರಾಜ್ ಇತರರು ಇದ್ದರು. ಸೂರ್ಯಪ್ರಭಾ ಪ್ರಾರ್ಥಿಸಿದರು. ಎಸ್.ಕೆ. ಶೇಷಾಚಲ ನಿರೂಪಿಸಿದರು. 846 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಮುನ್ನ
ಪ್ರತಿಭಾವಂತ ವಿದ್ಯಾರ್ಥಿಗಳ ಶೋಭಾಯಾತ್ರೆ ನಡೆಯಿತು.