Advertisement

ಅಡುಗೆ ಕೆಲಸಗಾರರ ಕಲ್ಯಾಣ ಮಂಡಳಿ ರಚಿಸಿ

01:19 PM May 24, 2017 | |

ದಾವಣಗೆರೆ: ಅಸಂಘಟಿತ ವಲಯದ ಅಡುಗೆ ಕೆಲಸಗಾರರಿಗೆ ಸಾಮಾಜಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಲ್ಯಾಣ ಮಂಡಳಿ ರಚನೆಗೆ ಸರ್ಕಾರ ಮುಂದಾಗಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ. 

Advertisement

ಮಂಗಳವಾರ ರೋಟರಿ ಬಾಲಭವನದಲ್ಲಿ ರಾಜ್ಯ ಅಡುಗೆ ಕೆಲಸ ಮಾಡುವವರ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮದುವೆ ಮತ್ತಿತರ ಸಭೆ, ಸಮಾರಂಭದಲ್ಲಿ ಕೆಲಸ ಮಾಡುವ ಅಡುಗೆಯವರಿಗೆ ಯಾವುದೇ ಭದ್ರತೆಯೇ ಇಲ್ಲ.

ತೀರಾ ಸಂಕಷ್ಟದಲ್ಲಿರುವ ಅಸಂಘಟಿತ ಅಡುಗೆ ಕೆಲಸಗಾರರಿಗೆ ಆರೋಗ್ಯ ಮತ್ತಿತರ ಸಾಮಾಜಿಕ ಸೌಲಭ್ಯ ಒದಗಿಸುವಂತಾಗಬೇಕು. ಸರ್ಕಾರ ಕಲ್ಯಾಣ ಮಂಡಳಿ ರಚಿಸಬೇಕು ಎಂದರು. ಕೇಂದ್ರ ಸರ್ಕಾರ ದೇಶದಲ್ಲಿರುವ 43 ಕೋಟಿ ಅಸಂಘಟಿತ ಕಾರ್ಮಿಕರ ಹಕ್ಕು ಸಂರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ದೇಶದ್ಯಾಂತ 43.70 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಲ್ಲಿ 4.50 ಕೋಟಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರು ಆಹಾರ ಬೆಳೆಯದಿದ್ದರೆ ದೇಶದ ಇತರೆ ವರ್ಗದ ಜನರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುವುದಿಲ್ಲ.

ಆದರೂ, ಯಾವುದೇ ಸರ್ಕಾರ ಕೃಷಿ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರ ಹಿತ ಕಾಯುವ ಕೆಲಸ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ 10 ಸಾವಿರ ಒಳಗೊಂಡಂತೆ ರಾಜ್ಯದಲ್ಲಿ 2.50 ಲಕ್ಷದಷ್ಟು ಅಡುಗೆ ಕೆಲಸಗಾರರು ಮತ್ತು ಸಹಾಯಕರಿದ್ದಾರೆ.

Advertisement

ಎಲ್ಲರಂತೆ ಸಾಮಾಜಿಕ ನ್ಯಾಯ, ಸೌಲಭ್ಯಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಅಡುಗೆ ಕೆಲಸಗಾರರ ಕಲ್ಯಾಣ ಮಂಡಳಿ ರಚನೆ, ಪಿಂಚಣಿ, ವೈದ್ಯಕೀಯ ಭತ್ಯೆ, ಮಕ್ಕಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಮಟ್ಟದಲ್ಲಿ ದೊಡ್ಡ ಸಂಘಟಿತ ಹೋರಾಟ ನಡೆಸಬೇಕು. 

ಸಿಪಿಐ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು. ರಾಜ್ಯ ಆಡುಗೆ ಕೆಲಸ ಮಾಡುವವರ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕ ಸಂಘದ ಸಲಹೆಗಾರ ಕೆ.ಎನ್‌. ರವಿಕುಮಾರ್‌ ಮಾತನಾಡಿ, ಅಡುಗೆ ಕೆಲಸ ಮಾಡುವ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರು ನ್ಯಾಯಯುತ ಸೌಲಭ್ಯಗಳನ್ನು ಪಡೆಯುವುದರಲ್ಲಿ ವಂಚಿತರಾಗಿದ್ದಾರೆ. ಎಲ್ಲಾ ಸರ್ಕಾರ ಸೌಲಭ್ಯ ಒದಗಿಸಲು ನಿರ್ಲಕ್ಷé ಮಾಡಿವೆ.

ಸರ್ಕಾರದ ಗಮನ ಸೆಳೆಯಲು ಐಕ್ಯತೆ ಮತ್ತು ಒಗ್ಗಟ್ಟಿನಿಂದ ಹೋರಾಟಕ್ಕೆ ಸಜ್ಜಾಗಬೇಕು ಎಂದು ತಿಳಿಸಿದರು. ಸರ್ಕಾರವು ಮದುವೆ ಛತ್ರ ಮತ್ತು ಇನ್ನಿತರೆ ಅದ್ಧೂರಿ ಸಮಾರಂಭಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಂದ ಸೆಸ್‌ ಸಂಗ್ರಹಿಸಿ, ಅಡುಗೆ ಕೆಲಸ ಮಾಡುವ ಮತ್ತು ಸಹಾಯಕರ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ  ರಚಿಸಿ, ಸೆಸ್‌ ಹಣ ಬಳಸಿಕೊಂಡು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. 

ಸಂಸ್ಥಾಪಕ ಅಧ್ಯಕ್ಷ ಬಿ.ಜಿ. ಶಂಕರ್‌ರಾವ್‌, ಉಪಾಧ್ಯಕ್ಷ ಕೆ.ಎಚ್‌. ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಬಾದ್ರಿ, ಮಂಜುನಾಥ್‌, ಟಿ. ರಂಗಯ್ಯ, ಶ್ರೀನಿವಾಸ್‌ ನಾಯ್ಕ, ಎಚ್‌. ಮಹೇಶ್ವರಪ್ಪ ದ್ಯಾಮೇನಹಳ್ಳಿ, ಆವರಗೆರೆ ವಾಸು ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next