Advertisement

ಡ್ರೈನೇಜ್‌ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಶುಚಿ :ಸಿಪಿಐಎಂ ಪ್ರತಿಭಟನೆ

11:43 AM Oct 22, 2017 | Team Udayavani |

ಮಹಾನಗರ: ಮನಪಾ ವ್ಯಾಪ್ತಿಯಲ್ಲಿ ವ್ಯಾಪಕಗೊಂಡಿರುವ ಡ್ರೈನೇಜ್‌ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್‌ನ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿದ ಘಟನೆಯನ್ನು ವಿರೋಧಿಸಿ ಶನಿವಾರ ಸಿಪಿಐಎಂ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

Advertisement

ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ಕುಮಾರ್‌ ಬಜಾಲ್‌ ಮಾತನಾಡಿ, ಕಾರ್ಮಿಕರನ್ನು ಮ್ಯಾನ್‌ಹೋಲ್‌ಗ‌ಳಿಗೆ ಇಳಿಸಿ ದುಡಿಸಬಾರದೆಂಬ ಸುಪ್ರೀಂ ಕೋರ್ಟ್ನ ಸ್ಪಷ್ಟ ನಿರ್ದೇಶನವಿದ್ದರೂ ಇಂದು ಅವುಗಳನ್ನೆಲ್ಲ ಗಾಳಿಗೆ ತೂರಲಾಗಿದೆ. 2 ದಿನಗಳಲ್ಲಿ 2 ಘಟನೆಗಳು ನಗರದ ಹೃದಯಭಾಗದಲ್ಲಿ ನಡೆದಿದ್ದರೂ, ಮೇಯರ್‌ ಹಾಗೂ ಕಮೀಷನರ್‌ ಉದ್ಧಟತನದಿಂದ ವರ್ತಿಸಿರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದರು.

ಕ್ರಮ ಜರಗಿಸಲು ಆಗ್ರಹ
ಈಗಾಗಲೇ ಮಂಗಳೂರು ನಗರಕ್ಕೆ ಡ್ರೈನೇಜ್‌ ವ್ಯವಸ್ಥೆಯ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಎಡಿಬಿಯಿಂದ ಸಾಲ ತಂದು 15 ವರ್ಷಗಳು ಕಳೆದರೂ ಇಂದಿನವರೆಗೂ ಯಾವುದೇ ವ್ಯವಸ್ಥೆಯಾಗಿಲ್ಲ. ಈಗ ಮತ್ತೆ ಡ್ರೈನೇಜ್‌ ದುರಸ್ತಿಗಾಗಿ ಅಮೃತ್‌ ಯೋಜನೆಯಿಂದ ಸಾಲ ತರಲಾಗಿದೆ. ಒಟ್ಟಿನಲ್ಲಿ ಡ್ರೈನೇಜ್‌ ಹೆಸರಿನಲ್ಲಿ ಭಾರೀ ಹಗರಣವೊಂದು ನಡೆದಿದ್ದು ಕೋಟ್ಯಂತರ ರೂ. ಹಣವನ್ನು ಗುಳುಂ ಮಾಡಲಾಗಿದೆ. ಆದರೆ ಅದರ ದುರಸ್ತಿಗಾಗಿ ಇಂದಿಗೂ ಕಾರ್ಮಿಕರನ್ನು ಬಳಸುತ್ತಿರುವುದು ತೀರಾ ಖಂಡನೀಯ. ಮೇಯರ್‌ ಕಮೀಷನರ್‌ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ನಗರದಾದ್ಯಂತ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ಸದಸ್ಯರಾದ ಯೋಗೀಶ್‌ ಜಪ್ಪಿನಮೊಗರು, ಡಿಎಸ್‌ಎಸ್‌ನ ರಾಜ್ಯ ನಾಯಕರಾದ ಎಂ. ದೇವದಾಸ್‌, ಡಿವೈಎಫ್‌ಐನ ಜಿಲ್ಲಾ ನಾಯಕ ನಿತಿನ್‌ ಕುತ್ತಾರ್‌, ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್‌, ಸಿಪಿಐಎಂ ನಾಯಕ ಸಂತೋಷ್‌ ಶಕ್ತಿನಗರ, ಸಂತೋಷ್‌ ಬಜಾಲ್‌, ಸಾದಿಕ್‌ ಕಣ್ಣೂರು, ಪ್ರೇಮನಾಥ ಜಲ್ಲಿಗುಡ್ಡೆ, ಸುರೇಶ್‌ ಬಜಾಲ್‌, ದಿನೇಶ್‌ ಶೆಟ್ಟಿ, ಭಾರತಿ ಬೋಳಾರ್‌, ದಲಿತ ಸಂಘಟನೆಯ ಜಿಲ್ಲಾ ನಾಯಕ ತಿಮ್ಮಯ್ಯ ಕೊಂಚಾಡಿ, ರಘುವೀರ್‌, ಯಮುನಾ ಪಚ್ಚನಾಡಿ, ರಘು ಎಕ್ಕಾರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next