ತಿರುವನಂತಪುರ: ಕೇರಳ ಸರಕಾರಿ ಸ್ವಾಮ್ಯದ ಆಯುರ್ವೇದಿಕ್ ಔಷಧ ಕಂಪೆನಿಯಾದ “ಔಷಧಿ’ ಈಗ ಗೋಮೂತ್ರ ಹಾಗೂ ಗೋಮಯದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಲಾಭಗಳಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಗೋವಿನ ಸಗಣಿ, ಗೋಮೂತ್ರ, ಹಾಲು, ತುಪ್ಪ ಮತ್ತು ಮೊಸರಿನಿಂದ ತಯಾರಿಸಲಾದ “ಪಂಚಗವ್ಯ ಘುತಮ್’ ಅನ್ನು ಈ ಕಂಪೆನಿಯು ಮಾರಾಟ ಮಾಡುತ್ತಿದೆ. ಈ ಔಷಧವು ಮಾನಸಿಕ ರೋಗಗಳು, ಜಾಂಡೀಸ್, ಜ್ವರ, ಅಪಸ್ಮಾರದಂಥ ರೋಗಗಳಿಗೆ ಪರಿಣಾಮಕಾರಿಯಾಗಿದ್ದು, ನೆನಪಿನ ಶಕ್ತಿ ಮತ್ತು ಏಕಾಗ್ರತೆಯ ಸುಧಾರಣೆಗೂ ಹೇಳಿ ಮಾಡಿಸಿದ ಔಷಧ ಎಂದು ಕಂಪೆನಿ ತಿಳಿಸಿದೆ.
ಭಾರತದಲ್ಲಿ ಆಯುರ್ವೇದ ಔಷಧಗಳನ್ನು ತಯಾರಿಸುತ್ತಿರುವ ಸರಕಾರಿ ಸ್ವಾಮ್ಯದ ಅತೀ ದೊಡ್ಡ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು “ಔಷಧಿ’ ಪಡೆದಿದೆ. ಇದು 498 ಬಗೆಯ ಆಯುರ್ವೇದಿಕ್ ಫಾರ್ಮುಲಾಗಳನ್ನು ಸಿದ್ಧಪಡಿಸಿರುವುದು ಮಾತ್ರವಲ್ಲದೇ, ಪಂಚಕರ್ಮ ಆಸ್ಪತ್ರೆಗಳಲ್ಲಿ ವಿವಿಧ ಆಯುರ್ವೇದಿಕ್ ಚಿಕಿತ್ಸೆಗಳನ್ನೂ ಒದಗಿಸುತ್ತಿದೆ.
2015ರಲ್ಲಿ ಔಷಧಿಯ ಮೂಲಕ ಕೇರಳ ಸರಕಾರವು 82 ಕೋಟಿ ರೂ. ಆದಾಯವನ್ನು ಗಳಿಸಿತ್ತು. ಈಗ ಲಾಭದ ಮೊತ್ತವು 10 ಕೋಟಿಯಿಂದ 23 ಕೋಟಿ ರೂ.ಗೆ ಹೆಚ್ಚಳವಾಗಿದೆ.
ಕಳೆದ ವರ್ಷವಷ್ಟೇ ಕೇರಳ ಸರಕಾರವು ಐಸಿಎಂಆರ್‌ಗೆ ಪತ್ರ ಬರೆದು, ಕೊರೊನಾ ಚಿಕಿತ್ಸೆಗೆ ಆಯುರ್ವೇದಿಕ್ ಔಷಧದ ಬಳಕೆಗೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿ ಪರಿಶೀಲಿಸುವಂತೆ ಕೋರಿತ್ತು.