Advertisement

ಕೋವಿಡ್ vs ಚೀನದ ಕಳಪೆ ಟೆಸ್ಟ್‌ ಕಿಟ್‌ಗಳು!

11:43 AM Apr 24, 2020 | mahesh |

ಕೋವಿಡ್ ದ ಮೂಲವಾದ ಚೀನ, ಈಗ ರೋಗದಿಂದ ಸಾಕಷ್ಟು ಚೇತರಿಸಿಕೊಂಡು, ಅನ್ಯ ದೇಶಗಳಿಗೆ ಟೆಸ್ಟ್‌ಕಿಟ್‌ಗಳನ್ನು, ಮಾಸ್ಕ್, ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾರಂಭಿಸಿದೆ. ಆದರೆ, ಅದು ಪೂರೈಸುತ್ತಿರುವ ಪರಿಕರಗಳು ದೋಷಪೂರಿತವಾಗಿರುವುದು ಅನೇಕ ದೇಶಗಳಿಂದ ವರದಿಯಾಗುತ್ತಿದೆ. ನಮ್ಮಲ್ಲೂ ಚೀನದಿಂದ ತರಿಸಿಕೊಂಡ ಅನೇಕ ರ್ಯಾಪಿಡ್‌ ಆ್ಯಂಟಿಬಾಡಿ ಟೆಸ್ಟ್‌ ಕಿಟ್‌ಗಳು ದೋಷಪೂರಿತವಾಗಿವೆ ಎಂದು ಪತ್ತೆಯಾಗಿದೆ. ಈ ವಿಚಾರವಾಗಿ ರಾಜಸ್ಥಾನ, ಪಶ್ಚಿಮ ಬಂಗಾಲ ಸೇರಿದಂತೆ ಹಲವು ರಾಜ್ಯಗಳಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಎರಡು ದಿನಗಳ ಕಾಲ ತನಿಖೆ ಪೂರ್ಣಗೊಳ್ಳುವವರೆಗೂ ಈ ಕಿಟ್‌ಗಳನ್ನು ಬಳಸಬೇಡಿ ಎಂದು ಮಂಗಳವಾರ ರಾಜ್ಯಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚೀನಿ ಕಂಪೆನಿಗಳ ಮೇಲೆ ಸಹಜವಾಗಿಯೇ ಅಸಮಾಧಾನ ಭುಗಿಲೆದ್ದಿದೆ.

Advertisement

ಕಳಪೆ ಕಿಟ್‌ಗಳು
ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳು ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದಿಲ್ಲ. ಬದಲಾಗಿ, ಜನರಲ್ಲಿ ಈ ವೈರಸ್‌ ಇತ್ತೇ ಮತ್ತು ಅವರಲ್ಲಿ ಇದಕ್ಕೆ ಪ್ರತಿರೋಧಕ ಅಂಶಗಳು ಬೆಳೆದಿವೆಯೇ ಎನ್ನುವುದನ್ನು ಈ ಟೆಸ್ಟ್‌ ಪತ್ತೆ ಹಚ್ಚುತ್ತದೆ. ಸ್ವಾಬ್‌ ಟೆಸ್ಟ್‌ಗಳ ಫ‌ಲಿತಾಂಶ ಬರಲು ಸಮಯ ಹಿಡಿಯುತ್ತದೆ. ಆದರೆ ರ್ಯಾಪಿಡ್‌ ಟೆಸ್ಟ್‌ ಫ‌ಲಿತಾಂಶ ಕೂಡಲೇ ಬರುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ರೋಗ ಹರಡುವಿಕೆಯ ಮೇಲೆ ಕಣ್ಗಾವಲಿಡಲು, ನವ ಹಾಟ್‌ಸ್ಪಾಟ್‌ಗಳನ್ನು ಪತ್ತೆ ಹಚ್ಚಲು ಈ ಟೆಸ್ಟ್‌ ತ್ವರಿತವಾಗಿ ಸಹಾಯಕ್ಕೆ ಬರುತ್ತದೆೆ. ಆದರೆ ಚೀನದಿಂದ ಜಗತ್ತಿನಾದ್ಯಂತ ರಫ್ತಾಗಿರುವ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳು, ತಪ್ಪು ಫ‌ಲಿತಾಂಶವನ್ನು ನೀಡುತ್ತಿವೆ. ಕೊರೊನಾ ವಿರುದ್ಧ ಆ್ಯಂಟಿಬಾಡಿ ಉತ್ಪಾದಿಸದವರ ದೇಹದಲ್ಲೂ ಆ್ಯಂಟಿಬಾಡಿ ಇರುವುದಾಗಿ ಇವು ಫ‌ಲಿತಾಂಶ ನೀಡಿದ ಉದಾಹರಣೆಗಳು ಬಹಳಷ್ಟಿವೆ!

ಭಾರತದಲ್ಲೇ ವಾರಕ್ಕೆ 5 ಲಕ್ಷ ಕಿಟ್‌ಉತ್ಪಾದನೆ?
ಅನೇಕ ರಾಷ್ಟ್ರಗಳಂತೆಯೇ ಭಾರತವೀಗ ಚೀನಿ ಕಂಪೆನಿಗಳ ಕಳಪೆ ಉತ್ಪನ್ನಗಳಿಂದ ಬೇಸತ್ತಿದ್ದು, ಪರ್ಯಾಯ ಮಾರ್ಗಕ್ಕೆ ಮೊರೆಹೋಗುತ್ತಿದೆ. ಈಗಾಗಲೇ ದಕ್ಷಿಣ ಕೊರಿಯಾದಿಂದ 4 ಲಕ್ಷ 50 ಸಾವಿರ ಟೆಸ್ಟಿಂಗ್‌ ಕಿಟ್‌ಗಳ ಮೊದಲ ಬ್ಯಾಚ್‌ ಬಂದಿಳಿದಿದೆ. ಕೆಲವೇ ದಿನಗಳಲ್ಲಿ ಜರ್ಮನಿ, ಕೆನಡಾ, ಜಪಾನ್‌ನಿಂದಲೂ ಕಿಟ್‌ಗಳು ಬರಲಿವೆ. ಸಿಂಗಾಪುರದಂಥ ರಾಷ್ಟ್ರಗಳಿಗೂ ಟೆಂಡರ್‌ ಕೊಡಲು ಭಾರತ ಯೋಚಿಸುತ್ತಿದೆ. ಇನ್ನು ಹರ್ಯಾಣದ ಮನೇಸರ್‌ನಲ್ಲಿರುವ ದ.ಕೊರಿಯಾದ ಕಂಪೆನಿ ಎಸ್‌ಡಿ ಬಯೋಸೆನ್ಸಾರ್‌ಗೂ ಕೂಡ ಟೆಸ್ಟ್‌ ಕಿಟ್‌ಗಳನ್ನು ಉತ್ಪಾದಿಸಲು ಕೇಂದ್ರದಿಂದ ಅನುಮತಿ ದೊರೆತಿದ್ದು, ಈ ಕಂಪೆನಿಗೆ ವಾರಕ್ಕೆ 5 ಲಕ್ಷ ಟೆಸ್ಟ್‌ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ ಎನ್ನಲಾಗಿದೆ. ಎಪ್ರಿಲ್‌ 30ಕ್ಕೆ ಈ ಕಂಪೆನಿ ಮೊದಲ ಬ್ಯಾಚ್‌ನಲ್ಲಿ 5 ಲಕ್ಷ ಕಿಟ್‌ಗಳನ್ನು ಪೂರೈಸಲಿದೆ.

ಚೀನ ಉತ್ಪನ್ನಗಳ ವಿರುದ್ಧ ದೂರು
ವರದಿಗಳ ಪ್ರಕಾರ, ಚೀನ ಮೂಲದ 100ಕ್ಕೂ ಅಧಿಕ ಕಂಪೆನಿಗಳು ಯುರೋಪ್‌ ರಾಷ್ಟ್ರಗಳಿಗೆ ಕೋವಿಡ್ ವೈರಸ್‌ ಟೆಸ್ಟಿಂಗ್‌ ಕಿಟ್‌ಗಳನ್ನು ಮಾರುತ್ತಿವೆಯಂತೆ. ಆದರೆ ಇವುಗಳಲ್ಲಿ ಬಹುತೇಕ ಕಂಪನಿಗಳಿಗೆ ಚೀನದಲ್ಲೇ ಕಿಟ್‌ಗಳನ್ನು ಮಾರಲು ಪರವಾನಗಿ ಸಿಕ್ಕಿಲ್ಲ! ಐರೋಪ್ಯ ವೈದ್ಯಕೀಯ ಸಂಸ್ಥೆಯ ನಿಯಮದ ಪ್ರಕಾರ ಟೆಸ್ಟ್‌ ಕಿಟ್‌ಗಳು ಸರಾಸರಿ 80 ಪ್ರತಿಶತ ಖಚಿತತೆಯಿಂದ ರೋಗ ಪತ್ತೆ ಮಾಡಬೇಕು. ಆದರೆ ಈ ಮಾನದಂಡವನ್ನು ಮುಟ್ಟಲು ಚೀನದಿಂದ ಬಂದ ಅನೇಕ ಟೆಸ್ಟ್‌ಕಿಟ್‌ಗಳು ವಿಫ‌ಲವಾಗುತ್ತಿವೆ.

ಸ್ಪೇನ್‌
ಅತಿಹೆಚ್ಚು ಕೋವಿಡ್ ಸೋಂಕಿತರಿರುವ ದೇಶಗಳಲ್ಲಿ ಒಂದಾದ ಸ್ಪೇನ್‌ ಇತ್ತೀಚೆಗೆ ಚೀನದಿಂದ ಬಂದ 6 ಲಕ್ಷ ಟೆಸ್ಟ್‌ ಕಿಟ್‌ಗಳು ದೋಷಪೂರಿತವಾಗಿವೆ ಎಂದರಿತು, ಅವುಗಳನ್ನು ಉತ್ಪಾದಕ ಕಂಪೆನಿ ಶೆಂಜೆನ್‌ ಬಯೋಈಸಿ ಟೆಕ್ನಾಲಜಿಗೆ ಹಿಂದಿರುಗಿಸಿತು. ಆದಾಗ್ಯೂ ಚೀನ, ತನ್ನ ದೇಶದ ಅಧಿಕೃತ ಉತ್ಪಾದಕರಿಂದಲೇ ಟೆಸ್ಟ್‌ ಕಿಟ್‌ಗಳನ್ನು ಖರೀದಿಸಬೇಕು ಎಂದು ಹೇಳಿತಾದರೂ, ಶೆಂಜೆನ್‌ ಬಯೋ ಈಸಿಯಲ್ಲಿ ಚೀನಿ ಸರ್ಕಾರದ ಪಾಲುದಾರಿಕೆಯೂ ಇದೆ ಎನ್ನಲಾಗುತ್ತದೆ.

Advertisement

ಬ್ರಿಟನ್‌
ಭಾರತವು ಚೀನ ಮೂಲದ ಗ್ವಾಂಗೌ ವಾಂಡೊ ಎನ್ನುವ ಕಂಪನಿಯಿಂದ ಕಿಟ್‌ಗಳನ್ನು ಆರ್ಡರ್‌ ಮಾಡಿದೆ. ಈ ಕಂಪೆನಿಯಿಂದ ಟೆಸ್ಟಿಂಗ್‌ ಕಿಟ್‌ಗಳನ್ನು ಬ್ರಿಟನ್‌ ಸರ್ಕಾರ ಕೂಡ ತರಿಸಿಕೊಂಡಿತ್ತಾದರೂ, ಈಗ ಅವು ದೋಷಪೂರಿತವಾಗಿವೆ ಎಂದು ಹಿಂದಿರುಗಿಸಿದೆ. ಇದಷ್ಟೇ ಅಲ್ಲದೇ ತಾನು ಆರ್ಡರ್‌ ಮಾಡಿದ 2 ಕಂಪೆನಿಗಳಿಂದ 20 ದಶಲಕ್ಷ ಡಾಲರ್‌ ಹಣವನ್ನು ರೀಫ‌ಂಡ್‌ ಪಡೆಯಲು ಬ್ರಿಟನ್‌ ಮುಂದಾಗಿದೆ.

ಫಿಲಿಪ್ಪೀನ್ಸ್‌
ಫಿಲಿಪ್ಪೀನ್ಸ್‌ ಸರ್ಕಾರ, ಚೀನದಿಂದ ತರಿಸಿಕೊಂಡ ಟೆಸ್ಟ್‌ ಕಿಟ್‌ಗಳನ್ನು ಗೋದಾಮುಗಳಿಗೆ ತಳ್ಳಿದೆ. “90 ಪ್ರತಿಶತ ನಿಖರತೆಯಿಂದ ರೋಗ ಪತ್ತೆ ಮಾಡುತ್ತದೆ ಎಂದು ಹೇಳಲಾಗಿತ್ತು, ಆದರೆ, 40 ಪ್ರತಿಶತ ಖಚಿತತೆಯೂ ಈ ಕಿಟ್‌ಗಳಿಗಿಲ್ಲ’ ಎಂದು ಚೀನಿ ಕಂಪೆನಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ ಫಿಲಿಪ್ಪೀನ್ಸ್‌

ಜೆಕ್‌ ರಿಪಬ್ಲಿಕ್‌
ಐರೋಪ್ಯ ರಾಷ್ಟ್ರ ಜೆಕ್‌ ಗಣರಾಜ್ಯವೂ ಚೀನದ ಕಳಪೆ ಕಿಟ್‌ಗಳಿಂದ ತೊಂದರೆ ಅನುಭವಿಸಿದೆ. ಅದು 1.83 ದಶಲಕ್ಷ ಡಾಲರ್‌ ಮೊತ್ತದಲ್ಲಿ ಚೀನದಿಂದ ತರಿಸಿಕೊಂಡ 3 ಲಕ್ಷಕ್ಕೂ ಅಧಿಕ ಕಿಟ್‌ಗಳು ದೋಷಪೂರಿತವಾಗಿದ್ದವು. ಇದರಿಂದಾಗಿ, ಸೋಂಕು ಪತ್ತೆಗೆ ಬಹುದೊಡ್ಡ ಅಡಚಣೆ ಉಂಟಾಯಿತೆಂದು, ಅಲ್ಲಿನ ಆಡಳಿತ ದೂರಿತು.

ಸ್ಲೊವಾಕಿಯಾ
ಮಧ್ಯ ಯುರೋಪಿಯನ್‌ ರಾಷ್ಟ್ರ ಸ್ಲೊವಾಕಿಯಾವಂತೂ ಚೀನದ ಮೇಲೆ ಹರಿಹಾಯುತ್ತಿದೆ. ಮಧ್ಯವರ್ತಿಯೊಬ್ಬರ ಮೂಲಕ ಅದು ಚೀನದ ಪ್ರಖ್ಯಾತಕಂಪೆನಿಯೊಂದರಿಂದ ತರಿಸಿಕೊಂಡ 12 ಲಕ್ಷ ಟೆಸ್ಟ್‌ ಕಿಟ್‌ಗಳು ದೋಷಪೂರಿತವಾಗಿವೆ. “ನಮ್ಮಲ್ಲಿ ಟನ್‌ಗಟ್ಟಲೇ ಚೀನದಿಂದ ರ್ಯಾಪಿಡ್‌ ಟೆಸ್ಟ್‌ ಕಿಟ್‌ಗಳು ಬಂದಿವೆ. ಒಂದೂ ಉಪಯೋಗಕ್ಕೆ ಬರುತ್ತಿಲ್ಲ. ಅವುಗಳನ್ನು ಸಮುದ್ರದಲ್ಲಿ ಎಸೆಯಬೇಕಷ್ಟೇ’ ಎಂದು ಸ್ಲೊವಾಕಿಯಾ ಪ್ರಧಾನಿ ಕಿಡಿಕಾರಿದ್ದಾರೆ.

-ಈ ರಾಷ್ಟ್ರಗಳಷ್ಟೇ ಅಲ್ಲದೇ, ಅಮೆರಿಕ, ಇಟಲಿ, ನೆದರ್‌ಲೆಂಡ್ಸ್‌, ಟರ್ಕಿ ಕೂಡ ಚೀನದಿಂದ ಬಂದ ಕಳಪೆ ಟೆಸ್ಟ್‌ಕಿಟ್‌ಗಳನ್ನು ಹಿಂದಿರುಗಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next