Advertisement

ಹೊಸ ವರ್ಷಕ್ಕೆ ಲಸಿಕೆ ಸಿಹಿ: ನಾಳೆ ದೇಶಾದ್ಯಂತ ಡ್ರೈ ರನ್‌ ಪ್ರಯೋಗ ಪ್ರಾತ್ಯಕ್ಷಿಕೆ

06:33 AM Jan 01, 2021 | Team Udayavani |

ಬೆಂಗಳೂರು/ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ದೇಶವಾಸಿಗಳಿಗೆ ಕೊರೊನಾ ಲಸಿಕೆಯ ಸಿಹಿ ಸುದ್ದಿ ನೀಡುವ ಬಗ್ಗೆ ಭಾರತ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಸುಳಿವು ನೀಡಿದೆ.

Advertisement

ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಸರಕಾರದ ಒಪ್ಪಿಗೆಗೆ ಕಾಯುತ್ತಿವೆ. ಇದರ ನಡುವೆ ಕೇಂದ್ರ ಸರಕಾರ ಶನಿವಾರದಿಂದ ಎಲ್ಲ ರಾಜ್ಯಗಳಲ್ಲೂ ಲಸಿಕೆಯ ಡ್ರೈ ರನ್‌ (ವಿತರಣೆ ಪ್ರಾತ್ಯಕ್ಷಿಕೆ) ನಡೆಸುವಂತೆ ಸೂಚಿಸಿರುವುದು ಕೊರೊನಾ ವಿರುದ್ಧದ ಹೋರಾಟದಲ್ಲಿ ಹೊಸ ಆಶಾಭಾವ ಹುಟ್ಟಿಸಿದೆ.

ಕರ್ನಾಟಕದಲ್ಲೂ ಡ್ರೈ ರನ್‌ಗೆ ಸಿದ್ಧತೆ ಮಾಡಲಾಗಿದೆ. ಶನಿವಾರ ನಡೆಯಲಿರುವ ವಿತರಣೆ ಪ್ರಾತ್ಯಕ್ಷಿಕೆ (ಡ್ರೈರನ್‌)ಗಾಗಿ ಆರೋಗ್ಯ ಇಲಾಖೆ ಸಜ್ಜಾಗಿದೆ.

ಬಿಬಿಎಂಪಿ (ಬೆಂಗಳೂರು ನಗರ ಸಹಿತ), ಮೈಸೂರು, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಡ್ರೈ ರನ್‌ ನಡೆಯಲಿದೆ. ಜಿಲ್ಲಾಸ್ಪತ್ರೆ, ತಲಾ ಒಂದು ತಾಲೂಕು ಮತ್ತು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುವಾರ ಆಯ್ಕೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ತಲಾ ಐದು ಸಿಬಂದಿ, ಲಸಿಕೆ ವಿತರಣೆಗೆ ಬೇಕಾದ ಅಗತ್ಯ ಸಲಕರಣೆಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಿಯೋಜಿತ ಆರೋಗ್ಯ ಸಿಬಂದಿಗೆ ಶುಕ್ರವಾರ (ಜ. 1) ಅಪರಾಹ್ನ 2 ಗಂಟೆಗೆ ಆನ್‌ಲೈನ್‌ ಮೂಲಕ ತರಬೇತಿ ನೀಡಲಾಗುತ್ತದೆ.

ಹೊಸ ವರ್ಷಕ್ಕೆ ಸಿಹಿ ಸುದ್ದಿ
ಭಾರತ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಹೊಸ ವರ್ಷದ ಮೊದಲ ದಿನವೇ ಸಿಹಿ ಸುದ್ದಿ ನೀಡುವುದಾಗಿ ಹೇಳಿದೆ. ಪುಣೆಯ ಸೀರಮ್‌ ಸಂಸ್ಥೆ ಮತ್ತು ಭಾರತ್‌ ಬಯೋಟೆಕ್‌ ಸಂಸ್ಥೆಗಳು ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿವೆ. ಬುಧವಾರ ಮೊದಲ ಹಂತದ ಸಭೆ ನಡೆದು, ಶುಕ್ರವಾರ ಎರಡನೇ ಹಂತದ ಪರಿಶೀಲನ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಲಸಿಕೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಸಿಬಂದಿಗೆ ಅನುಭವ
ಶನಿವಾರ ಬೆಳಗ್ಗೆ ಲಸಿಕೆ ವಿತರಣೆ ಪ್ರಾತ್ಯಕ್ಷಿಕೆ ನಡೆಯಲಿದೆ. ಭವಿಷ್ಯದಲ್ಲಿ ಲಸಿಕೆ ವಿತರಣೆಯನ್ನು ವ್ಯವಸ್ಥಿತವಾಗಿ ನಡೆಸಲು ತರಬೇತಿ- ಪ್ರಾತ್ಯಕ್ಷಿಕೆಗಾಗಿ ಈ ಡ್ರೈ ರನ್‌ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಎದುರಾಗುವ ಹೊಸ ಸಮಸ್ಯೆ, ಗೊಂದಲಗಳನ್ನು ಪಟ್ಟಿ ಮಾಡಿ ಕೇಂದ್ರ ಸರಕಾರಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆಯ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ| ಬಿ.ಎನ್‌. ರಜನಿ ತಿಳಿಸಿದ್ದಾರೆ.

ಹೇಗಿರಲಿದೆ ಡ್ರೈ ರನ್‌?
ಡ್ರೈ ರನ್‌ ವೇಳೆ ಈ ವೇಳೆ ಚುಚ್ಚುಮದ್ದು ನೀಡುವುದೊಂದನ್ನು ಬಿಟ್ಟು ಲಸಿಕೆ ನೀಡಿಕೆಗೆ ಸಂಬಂಧಿಸಿದ ಉಳಿದೆಲ್ಲ ಚಟುವಟಿಕೆಗಳು ನಡೆಯಲಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಸಿಕೆ ವಿತರಣೆಗೆ ಎಲ್ಲ ಸಿದ್ಧತೆಗಳು ಆಗುತ್ತಿವೆ. ಕಟ್ಟ ಕಡೆಯ ಫ‌ಲಾನುಭವಿಗೂ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆ ಸಿಗುವ ಹಾಗೆ ಮಾಡಲಾಗುತ್ತದೆ. ಜಗತ್ತಿನ ಅತೀ ದೊಡ್ಡ ಲಸಿಕೆ ವಿತರಣೆಗೆ ನಾವು ಸಿದ್ಧರಾಗುತ್ತಿದ್ದೇವೆ. – ನರೇಂದ್ರ ಮೋದಿ, ಪ್ರಧಾನಿ

ಡ್ರೈ ರನ್‌ ಪಕ್ಷಿನೋಟ
05 ಆಯ್ಕೆಯಾದ ಜಿಲ್ಲೆಗಳು
15 ಒಟ್ಟು ಆರೋಗ್ಯ ಕೇಂದ್ರ
100 ನಿಯೋಜಿತ ಆರೋಗ್ಯ ಸಿಬಂದಿ
375 ಪ್ರಾತ್ಯಕ್ಷಿಕೆ ಫ‌ಲಾನುಭವಿಗಳು

Advertisement

Udayavani is now on Telegram. Click here to join our channel and stay updated with the latest news.

Next