ವಾಷಿಂಗ್ಟನ್: ಕೋವಿಡ್ 19 ಮಹಾಮಾರಿ ಸೋಂಕಿನಿಂದ ನವಜಾತ ಶಿಶುಗಳ ಸಾವು ಅತೀ ವಿರಳವಾಗಿದೆ ಎಂದು ಅಮೆರಿಕದ ಇಲಿನಾಯ್ಸ್ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ 19 ಸೋಂಕಿನಿಂದ ಪುಟಾಣಿ ಮಕ್ಕಳ ಸಾವು ತುಂಬಾ ಅಪರೂಪದ ಪ್ರಕರಣಗಳಾಗಿವೆ ಎಂದು ಹೇಳಿದ್ದಾರೆ.
ಗವರ್ನರ್ ಜೆಬಿ ಪ್ರಿಟ್ಝೆಕೇರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು,ಕೋವಿಡ್ ವೈರಸ್ ನಿಂದ ಕಳೆದ 24 ಗಂಟೆಯಲ್ಲಿ ನವಜಾತ ಶಿಶುಗಳು ಸಾವನ್ನಪ್ಪಿರುವ ಯಾವ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಚಿಕಾಗೋದಲ್ಲಿ ಒಂದು ವರ್ಷದ ಮಗು ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಆದರೆ ಇದಕ್ಕೂ ಮೊದಲು ಕೋವಿಡ್ 19 ಸೋಂಕಿನಿಂದ ಶಿಶುಗಳು ಸಾವನ್ನಪ್ಪಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಚಿಕಾಗೋ ಮಗುವಿನ ಸಾವಿನ ಪ್ರಕರಣದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಸುದ್ದಿ ನಿಜಕ್ಕೂ ಆಘಾತಕಾರಿಯಾದದ್ದು, ಮಕ್ಕಳಿಗೆ ಈ ಸೋಂಕು ಹಬ್ಬಿದರೆ ಏನಾಗಬಹುದು ಎಂಬ ಕಳವಳ ನಮಗೂ ಇದೆ ಎಂದು ಗವರ್ನರ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಅಧ್ಯಯನದ ಪ್ರಕಾರ ಕೋವಿಡ್ 19 ಸೋಂಕು ವೃದ್ಧರಿಗೆ ಹೆಚ್ಚು ತಗುಲಿದೆ. ಇದರಲ್ಲಿ ಮಕ್ಕಳ ಪ್ರಮಾಣ ತುಂಬಾ ಕಡಿಮೆಯಾಗಿರುವುದಾಗಿ ತಿಳಿಸಿತ್ತು. ಜಗತ್ತಿನಲ್ಲಿ ಅತೀ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾಗಿರುವುದು ಅಮೆರಿಕದಲ್ಲಿ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೋವಿಡ್ 19 ವೈರಸ್ 1,20,000 ಜನರಿಗೆ ಹರಡಿದ್ದು, 2000 ಮಂದಿ ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ 450ಕ್ಕೂ ಅಧಿಕ ಜನರು ಮಾರಣಾಂತಿಕ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದು, ಚಿಕಾಗೋದ ಮಗು ಸೇರಿದಂತೆ 13 ಮಂದಿ ಇಲಿನಾಯ್ಸ್ ನಲ್ಲಿ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.