Advertisement

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ

12:00 AM Aug 11, 2020 | mahesh |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ, ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದೆ ಎಂದು ಗ್ರಾಮೀಣ ಪ್ರದೇಶದ ಶೇ. 74ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

Advertisement

ಇದೇ ವರ್ಷದ ಮೇ 30ರಿಂದ ಜು. 16ರವರೆಗೆ ದೇಶದ 23 ರಾಜ್ಯಗಳ 179 ಜಿಲ್ಲೆಗಳಲ್ಲಿನ ಹಳ್ಳಿಗಳ 25,371 ಜನರನ್ನು ಮುಖತಃ ಮಾತನಾಡಿಸಿ ಅಭಿಪ್ರಾಯ ದಾಖಲಿಸಲಾಗಿದೆ. ಗ್ರಾಮೀಣ ಭಾಗದ ಶೇ. 74ರಷ್ಟು ಜನರು ಮೋದಿಯವರ ಕ್ರಮಗಳನ್ನು ಮೆಚ್ಚಿದ್ದರೂ, ಶೇ. 14ರಷ್ಟು ಜನರು ಮೋದಿಯವರ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಶೇ. 40ರಷ್ಟು ಜನರು ಲಾಕ್‌ಡೌನ್‌ ಅವಧಿಯಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು ಎಂದಿದ್ದರೆ, ಶೇ. 38ರಷ್ಟು ಜನರು, ತುಸು ಕಷ್ಟಕರವಾಗಿತ್ತು ಎಂದಿದ್ದಾರೆ. ಶೇ. 11ರಷ್ಟು ಜನರು ಲಾಕ್‌ಡೌನ್‌ನಿಂದ ಯಾವುದೇ ಕಷ್ಟವಾಗಿಲ್ಲ ಎಂದರೆ, ಶೇ. 4ರಷ್ಟು ಜನರು ಲಾಕ್‌ಡೌನ್‌ ಜಾರಿಗೊಳಿಸಲೇಬಾರದಿತ್ತು ಎಂದಿದ್ದಾರೆ.

ವಿಚಿತ್ರವೆಂದರೆ, ಕೋವಿಡ್ ಸಂದರ್ಭಗಳನ್ನು ಮೆಚ್ಚಿಕೊಂಡವರಲ್ಲಿ ಬಿಜೆಪಿ ವಿರುದ್ಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿನ ಜನರೇ ಆಗಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೊರೊನಾ ಸಂಬಂಧಿ ಕ್ರಮಗಳ ಬಗ್ಗೆ ಅಷ್ಟಾಗಿ ಮೆಚ್ಚುಗೆ ವ್ಯಕ್ತವಾಗಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲುದಾರ ಸಂಸ್ಥೆಯಾದ ಗಾವೋ ಕನೆಕ್ಷನ್‌ ಸಂಸ್ಥೆ ತಿಳಿಸಿದೆ.

ಜಂಟಿ ಸಹಯೋಗದಲ್ಲಿ ನಡೆದಿದ್ದ ಸಮೀಕ್ಷೆ
ರಾಜ್ಯಗಳಲ್ಲಿನ ಹಳ್ಳಿಗರು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಗ್ರಾಮೀಣ ಜನರನ್ನು ಸಂಪರ್ಕಿಸಲು ಗಾಂವೋ ಕನೆಕ್ಷನ್‌ ಇನ್‌ಸೈಟ್ಸ್‌ ಎಂಬ ಸಿಎಸ್‌ಡಿಎಸ್‌ನ ಅಂಗಸಂಸ್ಥೆ ವ್ಯವಸ್ಥೆ ಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ನವದೆಹಲಿ ಮೂಲದ ಸೆಂಟರ್‌ ಫಾರ್‌ ಸ್ಟಡಿ ಆಫ್ ಡೆವಲಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯು ಈ ಸಮೀಕ್ಷೆ ನಡೆಸಿದೆ. “ಲೋಕನೀತಿ ಪ್ರೋಗ್ರಾಂ ಫಾರ್‌ ಕಂಪಾರೇಟಿವ್‌ ಡೆಮಾಕ್ರಸಿ’ ಎಂಬ ಸಂಶೋಧನೆಯನ್ನು ಸಿಎಸ್‌ಡಿಎಸ್‌ ಕೈಗೊಂಡಿದ್ದು, ಅದರ ಅಡಿಯಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಆ ಹಿನ್ನೆಲೆಯಲ್ಲಿ, ಸಿಎಸ್‌ಡಿಎಸ್‌ ರಚಿಸಿದ್ದ ಲೋಕನೀತಿ-ಸಿಎಸ್‌ಡಿಎಸ್‌ ಹೆಸರಿನ ತಂಡವೊಂದು ಸಮೀಕ್ಷಾ ಪ್ರಶ್ನೆಗಳನ್ನು ರೂಪಿಸಿತ್ತು. ಸಮೀಕ್ಷೆಯ ವೇಳೆ ದಾಖಲಾದ ಉತ್ತರಗಳನ್ನು ಇದೇ ತಂಡವೇ ವಿಶ್ಲೇಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next