ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು, ಆಯ್ದ ಕಡೆ ಲಾಕ್‌ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯು ಕೋವಿಡ್ ಹರಡದಂತೆ ವಹಿಸಬಹುದಾದ ಮುನ್ನೆಚ್ಚರಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಸಪ್ತಾಹವನ್ನು ಶುಕ್ರವಾರದಿಂದ ಆರಂಭಿಸಲಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರು, ಮಂಡಲ ಅಧ್ಯಕ್ಷರು, ವಿಭಾಗ ಪ್ರಭಾರಿಗಳು, ಸಂಘಟನ ಕಾರ್ಯದರ್ಶಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಚರ್ಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯಾದ್ಯಂತ ಬೂತ್ ಮಟ್ಟದಲ್ಲಿ ಕೋವಿಡ್ ವೈರಾಣು ಹರಡದಂತೆ ಆರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಶುಕ್ರವಾರದಿಂದ ಆರಂಭವಾಗಲಿದೆ. ಮಾಸ್ಕ್ ಧರಿಸುವುದು, ಅನಗತ್ಯವಾಗಿ ಹೊರಗೆ ಓಡಾಡದಿರುವುದು, 6 ಅಡಿ ಸಾಮಾಜಿಕ ಅಂತರ ಪಾಲನೆ, ಆಗಾಗ್ಗೆ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳುವುದು, ರೋಗ ನಿರೋಧಕ ಶಕ್ತಿ ವೃದ್ಧಿಗೆ ಕಷಾಯದ ಜತೆಗೆ ಬಿಸಿನೀರು ಸೇವನೆ ಹಾಗೂ ಅನಗತ್ಯವಾಗಿ ವಸ್ತು, ವ್ಯಕ್ತಿಗಳನ್ನು ಮುಟ್ಟದಿರುವುದು ಪ್ರಮುಖ ಮುಂಜಾಗ್ರತ ಕ್ರಮಗಳಾಗಿವೆ ಎಂದು ತಿಳಿಸಿದರು.
ಸಾಮಾಜಿಕ ಅಂತರ ಪಾಲಿಸಿಕೊಂಡೆ ಪಾದಯಾತ್ರೆ, ಫಲಕ ಪ್ರದರ್ಶನ ಇತರ ವಿಧಾನದ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುವುದು. ಆಟೋ ರಿಕ್ಷಾಗಳಲ್ಲಿ ಧ್ವನಿವರ್ಧಗಳ ಮೂಲಕವೂ ಮಾಹಿತಿ ನೀಡಲಾಗುವುದು. ಹಿರಿಯ ನಾಗರಿಕರಲ್ಲೂ ಅರಿವು ಮೂಡಿಸಲು ಒತ್ತು ನೀಡಲಾಗುವುದು. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ನಿರಂತರವಾಗಿ ತೊಡಗಿಸಿಕೊಂಡು ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.