Advertisement
ಈಗ ರಾಜ್ಯದಲ್ಲೂ ನಿತ್ಯ ಸೋಂಕು ಬೆಳವಣಿಗೆ ವೇಗ ಪಡೆದಿದೆ (ಶೇ. 4). ಇದೇ ವೇಗದಲ್ಲೇ ಮುಂದುವರಿದರೆ ಆಗಸ್ಟ್ 15ರ ವೇಳೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20-25 ಸಾವಿರ ತಲುಪಬಹುದು ಎಂದು ಕರ್ನಾಟಕ ಕೋವಿಡ್-19 ವಾರ್ ರೂಂ ಎಚ್ಚರಿಸಿದೆ. ಆದರೆ ನಿಸ್ಸಂಶಯವಾಗಿಯೂ ಅಷ್ಟೇ ಸಂಖ್ಯೆಯನ್ನು ತಲುಪಲಿದ್ದೇವೆ ಎಂದೇನೂ ಇಲ್ಲ.
Related Articles
Advertisement
ಆರ್ಥಿಕತೆಯನ್ನು ಹಳಿಗೇರಿಸಲು ಸರಕಾರ ಬಹುತೇಕ ವಲಯಗಳಿಗೆ ಚಾಲನೆ ನೀಡಿದೆ ಎನ್ನುವುದೇನೋ ಸರಿ, ಹಾಗೆಂದಾಕ್ಷಣ ಎಲ್ಲಾ ಸರಿ ಹೋಗಿಬಿಟ್ಟಿದೆ ಎಂದರ್ಥವಲ್ಲ. ಈಗ ಕೋವಿಡ್ 19 ಪಡೆಯುತ್ತಿರುವ ವೇಗವನ್ನು ಗಮನಿಸಿದರೆ, ನಾವು ಮೊದಲಿಗಿಂತ ಹೆಚ್ಚು ಜಾಗರೂಕರಾಗಿ ಇರಬೇಕಾದ ಅಗತ್ಯವಿದೆ.
ದುರಂತವೆಂದರೆ, ಕಟ್ಟುನಿಟ್ಟಾದ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ ಬಗ್ಗೆ ಜನರಿಗಿದ್ದ ಆತಂಕ ಈಗ ದೂರವಾಗಿಬಿಟ್ಟಿದೆಯೇನೋ ಅನ್ನಿಸುತ್ತಿದೆ. ಏಕೆಂದರೆ, ಸುಖಾಸುಮ್ಮನೇ ಹೊರಗೆ ತಿರುಗುವುದು, ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸುವುದು, ನೆಪಕ್ಕೆಂಬಂತೆ ಮಾಸ್ಕ್ ಧರಿಸುವುದು (ಪೊಲೀಸರನ್ನು ಕಂಡಾಗ) ಇಂಥ ವರ್ತನೆಗಳು ಬಹುತೇಕ ಕಡೆಗಳಲ್ಲಿ ಕಾಣಿಸುತ್ತಿವೆ.
ಹೊರಹೋಗಿ ಬಂದಾಕ್ಷಣ ಸ್ವಚ್ಛವಾಗಿ ಸೋಪಿನಿಂದ ಕೈತೊಳೆಯುತ್ತಿದ್ದವರು, ಈಗ ನೆಪ ಮಾತ್ರಕ್ಕೆ ಕೈತೊಳೆಯುತ್ತಿದ್ದಾರೆ ಅಥವಾ ಅದೂ ಇಲ್ಲ. ಕೋವಿಡ್ 19 ವಿರುದ್ಧದ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿರುವ ವೇಳೆಯಲ್ಲಿ ಜನಸಾಮಾನ್ಯರು ಈ ರೀತಿ ವರ್ತಿಸಿದರೆ, ದೇಶದ ಪ್ರಯತ್ನಕ್ಕೆ ದೇಶವಾಸಿಗಳೇ ಅಡ್ಡಗಾಲು ಹಾಕಿದಂತಾಗುತ್ತದಷ್ಟೆ.
ಆದಾಗ್ಯೂ, ಇಂಥದೊಂದು ಅಸಡ್ಡೆಯ ಮನೋಭಾವನೆ ನಿರ್ಮಾಣವಾಗಲಿದೆ ಎಂದು ಮನಶ್ಯಾಸ್ತ್ರಜ್ಞರು ಮೊದಲೇ ಎಚ್ಚರಿಸಿದ್ದರು ಎನ್ನುವುದು ವಿಶೇಷ. ಇದನ್ನು ಅವರು ‘Caution Fatigue’ ಎಂದು ಕರೆಯುತ್ತಾರೆ.
ಸರಳವಾಗಿ ಹೇಳಬೇಕೆಂದರೆ, ಒಂದು ವಿಪತ್ತಿನ ಕುರಿತು ಆರಂಭದಲ್ಲಿ ಇರುವ ಆತಂಕ, ಎಚ್ಚರಿಕೆ ದಿನಗಳೆದಂತೆ ಹಲವು ಕಾರಣಗಳಿಂದಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಪರಿಣಾಮವಾಗಿ, ಮನಸ್ಸು ವಿಪತ್ತಿಗೂ ಮುನ್ನ ನಾವು ಹೇಗಿದ್ದೆವೋ ಹಾಗೆಯೇ ಬದುಕಲು ಪ್ರೇರೇಪಿಸುತ್ತಿದೆ. ಇದರ ದುಷ್ಪರಿಣಾಮವನ್ನೇ ನಾವೀಗ ನೋಡುತ್ತಿದ್ದೇವೆ. ಆದರೆ, ನೆನಪಿರಲಿ ಆರಂಭದ ದಿನಗಳಲ್ಲಿ ಭಯ ನಮ್ಮಲ್ಲಿ ಒಂದು ಶಿಸ್ತನ್ನು, ಮುನ್ನೆಚ್ಚರಿಕೆಯ ಭಾವನೆಯನ್ನು ಸೃಷ್ಟಿಸಿತ್ತು. ಹಾಗೆಂದು, ಭಯವೇ ನಮ್ಮನ್ನು ಹೆಚ್ಚು ದಿನ ನಿರ್ದೇಶಿಸುವುದಿಲ್ಲ. ಹೀಗಾಗಿ, ಈಗ ನಮ್ಮ ನಡೆಯನ್ನು ಬುದ್ಧಿವಂತಿಕೆಯೇ ನಿರ್ದೇಶಿಸುವಂತಾಗಲಿ.