Advertisement

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

11:30 PM Nov 01, 2024 | Team Udayavani |

ತುಳುನಾಡಿನಲ್ಲಿ ಜೀವನಾವರ್ತನದ ಒಂದಿಲ್ಲೊಂದು ಹಬ್ಬಗಳು ವರ್ಷವಿಡೀ ಇರುವುದಾದರೂ ಪರ್ಬ ಎಂದರೆ ಹಬ್ಬವೆಂದು ಹೇಳುವ ರೂಢಿ ದೀಪಾವಳಿಗೆ ಮಾತ್ರ. ನಮ್ಮ ಹಿರಿಯರು ಅದಕ್ಕೆ ಅಷ್ಟು ಮಹತ್ವ ನೀಡಿದ್ದಾರೆ. ದೀಪಾವಳಿ ಮೂರು ದಿನಗಳ ಹಬ್ಬ. ಅದರಲ್ಲಿ ಮೂರನೇಯ ದಿನದಂದು ಪಾಡ್ಯ ಅಥವಾ ಬಲಿ ಪಾಡ್ಯ/ ಪಾಡ್ಯಮಿ.

Advertisement

ಆದಿಯಲ್ಲಿ ಬಲಿ ಚಕ್ರವರ್ತಿ ಈ ತುಳುನಾಡನ್ನು ಆಳಿಕೊಂಡಿದ್ದ ಧರ್ಮಿಷ್ಟ ಜನಾನುರಾಗಿ ದಾನವ ರಾಜನೆಂಬ ನಂಬಿಕೆ. ಅವನ ಹೆಸರಿನಲ್ಲೇ ಈ ಹಬ್ಬವಾದುದರಿಂದ ಬಲಿ ಪಾಡ್ಯವೆಂದು ಕರೆಯುವರು. ಬಲೀಂದ್ರ ಪೂಜೆಯ ಒಂದು ವೈಶಿಷ್ಟéವೇ ಭೂಮಿ ಪೂಜೆ. ಅನ್ನ ನೀಡುವ ಪುಣ್ಯ ನೆಲವನ್ನು ಅತೀ ಶ್ರದ್ಧೆ, ಭಕ್ತಿಯಿಂದ ಆರಾಧಿಸುವುದಕ್ಕೆ ದೀಪಾವಳಿಯ ಮೊದಲ ಆದ್ಯತೆ. ಈ ದಿನ ಮನೆಯ ಸ್ಥಿರಚರ ಸೊತ್ತುಗಳು ಮನೆಯ ಲ್ಲಿರಬೇಕು. ಸಾಲ ಕೊಡಲು ಬಾಕಿಯಿದ್ದರೆ ಸಂದಾಯ ಮಾಡಬೇಕು, ಬರಲು ಬಾಕಿ ಯಿದ್ದರೆ ವಸೂಲಿ ಸ್ವೀಕಾರ. ಮನೆ ಹಟ್ಟಿ ಕೊಟ್ಟಿಗೆ, ಅಂಗಳ, ಹಿತ್ತಲು ಮತ್ತು ಸುತ್ತಲ ಆವರಣವನ್ನು ಸೆಗಣಿ ಸಾರಿಸಿ, ನಿರ್ಮಲ ಗೊಳಿಸಿ, ಹೊಸ್ತಿಲು, ದ್ವಾರಕ್ಕೆ ಶೇಡಿಯ ಚಿತ್ತಾರ ಬರೆದು, ಲಕ್ಷ್ಮೀ ಸ್ವರೂಪಿಯಾದ ಧನ ಧಾನ್ಯವನ್ನು ಸ್ವಾಗತಿಸಲು ನಿರ್ಮಲ ಪರಿಸರ ನಿರ್ಮಾಣ ಮಾಡುವರು.

ಗೋಪೂಜೆ
ಈಗಿನ ಸ್ಥಿತಿ ಹೇಳುವುದೇ ಬೇಡ. ಅಂದರೆ ಹಿಂದೆಲ್ಲ ಹಟ್ಟಿ ಕೊಟ್ಟಿಗೆಯಲ್ಲಿ ಗದ್ದೆ ಉಳುವ ಕೋಣಗಳು, 8-10 ಹಸು ಕರುಗಳಿದ್ದ ಮನೆಗಳು. ನನ್ನ ಬಾಲ್ಯದಲ್ಲಿ ನಮ್ಮ ಕೊಟ್ಟಿಗೆಯಲ್ಲೂ 6-7 ಹಸು-ಕರುಗಳಿದ್ದವು. ಪಾಡ್ಯದ ದಿನ ಮುಂಜಾನೆ ಎದ್ದು ಹಿರಿಯರನ್ನು ಗೌರವಿಸಿ, ಹಸುಗಳನ್ನು ಒಮ್ಮೆ ಗುಡ್ಡಕ್ಕೆ ಬಿಟ್ಟು, ಹೊತ್ತೇರುವ ಒಳಗೆ ಅವುಗಳನ್ನು ಕರೆತಂದು, ಮನೆ ಪಕ್ಕದಲ್ಲೇ ಇದ್ದ ಹೊಳೆ ಯಲ್ಲಿ ಮೀಯಿಸಿ ತಂದು ಅಲಂಕರಿಸುವುದು, ಕಡುಬು ತಿನ್ನಿಸುವುದು, ಕೊರಳಿಗೆ ಗೊಂಡೆ ಹೂವಿನ ಮಾಲೆ ಹಾಕಿ ಸಿಂಗರಿಸುವುದು, ಕತ್ತಲಿಗೆ ಹಟ್ಟಿಗೆ ಕೈಸೆಟ್ಟಿಯಲ್ಲಿ ಭತ್ತ, ಹಣ್ಣು, ಗಟ್ಟಿ (ಕಡುಬು ) ಗಂಧ, ಕುಂಕುಮ ದೀಪದೊಂದಿಗೆ ಹೋಗಿ, ದನಗಳಿಗೆ ಆರತಿ ಮಾಡಿ, ಕುಂಕುಮ ಹಚ್ಚಿ, ಗಟ್ಟಿ ತಿನ್ನಿಸುವುದು. ಹಟ್ಟಿ ಹಿಂಗಡೆಯ ಗೊಬ್ಬರ ರಾಶಿಗೆ, ಮನೆಯ ಸುತ್ತ ದೀಪವಿಡುವುದು, ಹೂ, ವೀಳ್ಯ ವಿರಿಸುವುದು. ಹೊಲ ಗಳಿದ್ದವರು ರಾತ್ರಿ ಗದ್ದೆ ಬದಿಗೆ ದೊಂದಿಯೊಂದಿಗೆ ಹೋಗಿ ದೀಪ ಇರಿಸುವುದು.

ತುಳಸಿ ಕಟ್ಟೆ ಸಿಂಗರಿಸಿ ಮನೆಯಜಮಾನ/ ಹಿರಿಯರು ಅದರಾಚೆ ಮೊದಲೇ ಸಿದ್ಧ ಮಾಡಿಟ್ಟ “ಬಲೆಕಿ ಮರ’ಕ್ಕೆ ಧೂಪ, ದೀಪ ಎಲೆ ಅಡಿಕೆ, ಕೇಪಳ, ಕಾಡ ಹೂಗಳನಿಟ್ಟು ಮೂರು ಬಾರಿ “ಬಲೀನª† ಲೆಪ್ಪು’ ಕೂಗುವುದು. ( ಓ ಬಲೀದ್ರಾ, ಓ ಬಲೀದ್ರಾ ಬೊಂತೆಲ್‌ ಡ್‌ ಮೂಜಿ ದಿಂತಾ ಬಲಿ ಕೊನೊರೆ ಬತ್ತ್ ರ್‌ಲಾ, ಬಲಿ ಕೊನೊರೆ ಬತ್ತ್ ರ್‌ಲಾ, ಪೊಲಿ ಕೊರ್ದು ಪೊಲಾ… ( ಪ್ರಾದೇಶಿಕ ವ್ಯತ್ಯಾಸಗಳಿವೆ ) ಮುಂತಾಗಿ ಮನೆಮಂದಿ ಸೇರಿ ಸ್ವಾಗತಿಸಿ, ಪ್ರಾರ್ಥಿಸಿ ಪೂಜಿಸಿ, ಸಂತೋಷ ಪಡಿಸಿ ಕಳಿಸಿಕೊಡುವುದು… ಹೀಗೆ ರೂಢಿಗಳು. ಮನೆಯಲ್ಲಿ ದೈವಗಳ ಮಂಚವಿದ್ದರೆ ಅವಕ್ಕೆ ಹಿಂದಿನ ದಿನ ಅಮಾವಾಸ್ಯೆಯಂದೇ ಪನಿವಾರ ಪೂಜೆ ನಡೆಸುವುದು, ಕೆಲವೆಡೆ ತುಳಸಿ ಪೂಜೆಯೂ ದೀಪಾವಳಿ ಯಂದು ನಡೆಯುತ್ತದೆ. ರಾತ್ರಿ ಎಲ್ಲ ಕಡೆ ದೀಪಬೆಳಗಿ ಬಳಿಕ ಸಹ ಭೋಜನ.

ಅಂಗಡಿ ಪೂಜೆ, ಮಂಡ ಪೂಜೆ ಲಕ್ಷ್ಮೀ ಪೂಜೆ, ಆಟ, ತಿರುಗಾಟಗಳು
ಪಾಡ್ಯದಂದು ಅಂಗಡಿ ಮುಂಗಟ್ಟು ವ್ಯವಹಾರ ಇರುವವರು ಎಲ್ಲೆಡೆ ಸಾರ್ವತ್ರಿಕ ಪೂಜೆ ನಡೆಸುವರು. ಹಿಂದೆಲ್ಲ ಊರ ಪೇಟೆಯಲ್ಲಿ ಮಾತ್ರ ಅಂಗಡಿ, ಜಿನಸಂಗಡಿಗಳಿದ್ದವು. ಪಾಡ್ಯದ ಬೆಳಗಿನ ಕೆಲಸ ಮಧ್ಯಾಹ್ನ ಊಟದ ಬಳಿಕ ಬಿಡುವಿದ್ದವರು ಹೊಸ ಉಡುಪು ತೊಟ್ಟು ಹೊರಗೆ ತಿರುಗಾಟ. ಸಂಜೆ ಪೇಟೆಯ ಅಂಗಡಿ ಪೂಜೆಗಳಿಗೆ ಗ್ರಾಹಕರಿಗೆಲ್ಲ ಆಹ್ವಾನವಿರುತ್ತಿತ್ತು. ಪ್ರತೀ ಅಂಗಡಿಗಳ ಪೂಜೆಯ ಬಳಿಕ ಮಂಡಕ್ಕಿ ಪ್ರಸಾದ ಮೆಲ್ಲುತ್ತ ಗೆಳೆಯರೊಂದಿಗೆ ಮತ್ತೂಂದೆಡೆ ಹೋಗುವುದೇ ಮಜಾವಾಗಿರುತ್ತಿತ್ತು.

Advertisement

ಬಲೀಂದ್ರ, ಬಲೆಕಿ ಮರ
ಪುರಾಣ ಕಥೆಯ ಮಹಾಬಲಿ ಅಥವಾ ಬಲಿ ಚಕ್ರವರ್ತಿ ಮಹಾವಿಷ್ಣುವಿನ ನೃಸಿಂಹಾವತಾರದಲ್ಲಿ ಹತನಾದ ದಾನವ ರಾಜ ಹಿರಣ್ಯಕಶಿಪುವಿನ ವಂಶದವನು. ಪ್ರಹ್ಲಾದನ ಮೊಮ್ಮಗ ಎಂದರೆ ವಿರೋಚನನ ಮಗ ಬಲಿ ಮಹಾಶೂರನಾಗಿ ದೇವಾನು ದೇವತೆಗಳನ್ನೆಲ್ಲ ಸೋಲಿಸಿ ಭೂಮಂಡಲದ ಅಧಿಪತಿಯಾಗಿ ಅಳುತ್ತಿದ್ದ. ಅವನು ಶೂರನಾಗಿದ್ದಂತೆಯೇ ಧರ್ಮಾತ್ಮನೂ, ದಯಾಳುವೂ, ಪ್ರಜಾನುರಾಗಿಯೂ ಆಗಿದ್ದ. ವಿಷ್ಣು ಭಕ್ತನಾದ ಅವನು ಇಂದ್ರ ಪದವಿಗೆ ಅರ್ಹ ನಾಗಿದ್ದ. ಬಲಿಯನ್ನು ಹೇಗಾದರೂ ಮರ್ದಿಸಬೇಕೆಂಬ ದೇವತೆಗಳ ಬೇಡಿಕೆ ಯಂತೆ ವಿಷ್ಣು ವಾಮನಾವತಾರ ತಾಳಿ ಬಾಲವಟು ರೂಪದಲ್ಲಿ ಬಲಿಯ ಬಳಿಗೆ ಬರುವಾಗ ಬಲಿ ಒಂದು ಮಹಾಯಾಗವನ್ನು ಮಾಡಿ, ಯಾರು ಬಂದು ಏನನ್ನು ಕೇಳಿದರೂ ಇಲ್ಲವೆನ್ನದೆ ದಾನ ನೀಡುವ ಸಂದರ್ಭದಲ್ಲಿ, ವಾಮನ ಬಂದು ಮೂರು ಹೆಜ್ಜೆ ಭೂಮಿ ದಾನ ಕೇಳುತ್ತಾನೆ. ಬಲಿ ಸಿದ್ಧ ನಾಗುತ್ತಾನೆ. ವಾಮನ ಒಂದು ಹೆಜ್ಜೆಯಿಂದ ಭೂಮಿಯನ್ನು ಆಕ್ರಮಿಸಿ, ಇನ್ನೊಂದರಿಂದ ಆಕಾಶವ ನ್ನಾಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿರಿಸಲಿ ಎಂದು ಕೇಳುವಾಗ ಬಲಿ (ಎಲ್ಲವನ್ನು ಅರ್ಥ ಮಾಡಿಕೊಂಡಿದ್ದರೂ ) ಹೆಜ್ಜೆ ನನ್ನ ತಲೆಯ ಮೇಲಿಡಿ ಎನ್ನಲು ವಾಮನನ ಮೂರನೇ ಹೆಜ್ಜೆ ಬಲಿಯ ತಲೆ ಮೆಟ್ಟಿ ಅವನನ್ನು ಪಾತಾಳಕ್ಕಿಳಿಸುತ್ತಾನೆ.

ಆದರೂ ತನ್ನ ಭಕ್ತನಾದ ಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರೀತಿಯ ಪ್ರಜೆಗಳನ್ನು ಕಂಡು ಹೋಗುವಂತೆ ವರ ನೀಡುತ್ತಾನೆ. ಆ ದಿನವೇ ಬಲಿ ಪಾಡ್ಯ. ಮಹಾಧರ್ಮಿಷ್ಟ ಬಲಿಯ ತ್ಯಾಗ, ದಾನ ಗುಣವಷ್ಟೇ ಲೋಕದ ಜನರ ಒಡಲಲ್ಲಿ ಶಾಶ್ವತವಾಗುತ್ತದೆ.

ಬಲಿ ಪಾಡ್ಯದಂದು ತುಳುವರು ಮನೆಯೆದುರು ತಮ್ಮ ಜಮೀನಿನಲ್ಲಿ ಬಿದಿರಿನ ಕೋಲಿನಿಂದ ಆಳೆತ್ತರದ ಕೋಲು (ಕಂಬ ) ಊರಿ ಮರದ ಸಂಕೇತ ಮಾಡಿ, ಅದರ ಅಂಕಣಗಳಿಗೆ ದೀಪ ಹೊತ್ತಿಸಿ ಬಲಿಂದ್ರನನ್ನು ಗಟ್ಟಿಯಾಗಿ ಕೂಗಿ ಸ್ವಾಗತಿಸುವ ಕ್ರಮ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಡೆಯುತ್ತಿದ್ದು, ಎಲ್ಲೆಡೆಯ ಆ ಧ್ವನಿಗೆ ಊರು ಸಂಭ್ರಮಿಸುತ್ತದೆ, ಜೀವಂತಿಕೆ ಪಡೆಯುತ್ತದೆ.

ತುಳುವರು ಬೆರ್ಮೆರ್‌ ತಮ್ಮ ಮೂಲ ದೇವರು ಎಂದು ನಂಬುತ್ತಾರೆ. ಬಲಿ ಚಕ್ರವರ್ತಿಯೇ ಬೆರ್ಮೆರ್‌ ಅಥವಾ ಬೆರ್ಮೆರ್‌ ಕಲ್ಪನೆಯೇ ಬಲಿ ನಂಬಿಕೆ ಆಗಿರುವ ಸಾಧ್ಯತೆಯೂ ಇದೆ. ಏನಿದ್ದರೂ ಆದಿ ಪುರುಷ, ಆದಿ ಮಾತೆಯನ್ನು ಸ್ಮರಿಸುವ ಪರಂಪರೆಗಳು ಹಿರಿಯರನ್ನು ನೆನಪಿಸುವ ಒಂದು ಮಾದರಿ.

– ಮುದ್ದು ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next