Advertisement
ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಸಂಜೆ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ 2022ರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ಸದಸ್ಯರು ಪಕ್ಷಭೇದ ಮರೆತು ಎಲ್ಲಾ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿದರು.
Related Articles
Advertisement
ಜೆಡಿಎಸ್ ಸದಸ್ಯೆ ಪ್ರೇಮಾ ಶಂಕರೇಗೌಡ ಮಾತನಾಡಿ, ದಸರಾ ಆರಂಭಕ್ಕೂ ಮುನ್ನ ಗುಂಡಿ ಮುಕ್ತ ಮೈಸೂರು ನಗರ ಮಾಡಬೇಕು. ಪ್ರಧಾನಿ ಬಂದಾಗ 10 ಕೋಟಿ ರೂ. ಖರ್ಚು ಮಾಡಿ ರಸ್ತೆ ಅಭಿವೃದ್ಧಿ ಮಾಡಿದ್ದೇವೆ. ಈಗ ರಾಷ್ಟ್ರಪತಿ ಬರುತ್ತಿದ್ದಾರೆ. ಇಡೀ ಮೈಸೂರು ಅಭಿವೃದ್ಧಿಪಡಿಸಬೇಕು. ಗುಂಡಿ ಮುಚ್ಚಲು ವಾರ್ಡಿಗೆ 20 ಲಕ್ಷ ರೂ. ನೀಡಬೇಕು. ಹೆಚ್ಚುವರಿ ಪೌರಕಾರ್ಮಿಕರನ್ನು ನೀಡಬೇಕು ಎಂದು ಮೇಯರ್ ಅವರಲ್ಲಿ ಮನವಿ ಮಾಡಿದರು.
ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ ಮಾತನಾಡಿ, ದಸರಾ ಕಾಮಗಾರಿ ನಿರ್ವಹಣೆಗೆ ಜಿಲ್ಲಾಡಳಿತದಿಂದ ಇಂಜಿನಿಯರ್ ಶಾಖೆಗೆ 1 ಕೋಟಿ 60 ಲಕ್ಷ, ಒಳಚರಂಡಿಗೆ 18 ಲಕ್ಷ, ನೀರು ಸರಬರಾಜಿಗೆ 10 ಲಕ್ಷ, ಆರೋಗ್ಯ ಮತ್ತು ಸ್ವತ್ಛತೆಗೆ 30 ಲಕ್ಷ ಅನುದಾನ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ರಾಮಪ್ರಸಾದ್ ಮಾತನಾಡಿ, ದಸರಾ ಉತ್ಸವಕ್ಕೆ ದೇಶ ವಿದೇಶಗಳಿಂದ ಮೈಸೂರಿಗೆ ಪ್ರವಾಸಿಗರು ಆಗಮಿಸುತ್ತಾರೆ. ಈ ವೇಳೆ ಯಾವುದೇ ಮುಜುಗರವಾಗದಂತೆ ಸ್ವತ್ಛತೆ ಆದ್ಯತೆ ಕೊಡಬೇಕು ಎಂದು ಹೇಳಿದರು. ಬಿಜೆಪಿ ಸದಸ್ಯೆ ವೇದಾವತಿ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಡೆಂಗ್ಯು ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ. ಹಾಗೇ ಮಾನಸಗಂಗೋತ್ರಿಯ ಜೆ.ಸಿ.ರಸ್ತೆಯಲ್ಲಿ ಬೀದಿದೀಪಗಳು ಕೆಟ್ಟಿದ್ದು, ಶೀಘ್ರ ದುರಸ್ತಿಪಡಿಸಬೇಕು ಎಂದು ಕೋರಿದರು. ಅಶೋಕಪುರಂ ಗರಡಿಯಲ್ಲಿ ದೀಪಾಲಂಕಾರ ಮಾಡುವಂತೆ ಸದಸ್ಯೆ ಪಲ್ಲವಿ ಬೇಗಂ ಮನವಿ ಮಾಡಿದರು.
ಪಾಲಿಕೆ ಸದಸ್ಯೆಗೆ ನೆರವಾಗುವಂತೆ ಮನವಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಭರತ್ ಅವರಿಗೆ 5 ಲಕ್ಷ ರೂ.ಗಳ ನೆರವು ನೀಡಬೇಕು ಎಂದು ಎಲ್ಲಾ ಸದಸ್ಯರು ಒತ್ತಾಯಿಸಿದರು. ಬಿಜೆಪಿ ಸದಸ್ಯ ರಮೇಶ್ ಪ್ರಸ್ತಾಪಿಸಿದ ವಿಷಯನ್ನು ಹಲವರು ಅನುಮೋದಿಸಿದರು. ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸುವಂತೆ ಕೋರಿದರು. ಆಯುಕ್ತರಿಂದ ಮಾಹಿತಿ ಪಡೆದು ನೆರವು ನೀಡುವುದಾಗಿ ಮೇಯರ್ಶಿವಕುಮಾರ್ ಭರವಸೆ ನೀಡಿದರು. ಸಭೆಯ ಕೊನೆಯಲ್ಲಿ ಮಾತನಾಡಿದ ಮೇಯರ್ ಶಿವಕುಮಾರ್, ಈಗಾಗಲೇ ಸ್ಥಳೀಯ ಶಾಸಕರು ಮತ್ತು ಮೇಯರ್ ಅನುದಾನದಲ್ಲಿ ಹಲವು ರಸ್ತೆಗಳ ಗುಂಡಿಮುಚ್ಚುವ ಕಾರ್ಯ ನಡೆದಿದೆ. ಬಾಕಿ ಉಳಿದ ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ನೀಡಲಾಗುವುದು. ಜತೆಗೆ ಮನೆ ಮನೆ ದಸರಾಗೆ ಎಲ್ಲಾ ಶಾಸಕರಿಗೂ 2 ಲಕ್ಷ ರೂ. ಅನುದಾನ ನೀಡುತ್ತೇವೆ. ನಗರದ ರಾಜ ಮಾರ್ಗದಲ್ಲಿ ಅನಧಿಕೃತವಾಗಿ ಫುಟ್‌ಪಾತ್ ಒತ್ತುವರಿ ಮಾಡಿರುವುದನ್ನು ತೆರವು ಮಾಡುತ್ತೇವೆ ಎಂದು ಭರವಸೆ ನೀಡಿದರು. ಉಪ ಮೇಯರ್ ಡಾ.ಜಿ.ರೂಪಾ, ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ ಇದ್ದರು. ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆ ಆಕ್ಷೇಪ
ದಸರಾ ಸಂಬಂಧ ಕರೆದಿದ್ದ ವಿಶೇಷ ಕೌನ್ಸಿಲ್‌ನಲ್ಲಿ ದಸರಾ ಸಂಬಂದ ಚರ್ಚೆಗೆ ಮುಂದಾಗದ ಕಾಂಗ್ರೆಸ್ -ಜೆಡಿಎಸ್ ಸದಸ್ಯರು ಗ್ಯಾಸ್ ಪೈಪ್‌ಲೈನ್ ಕಾಮಗಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಿಂದಿನ ಕೌನ್ಸಿಲ್ ಸಭೆಯಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಬಗ್ಗೆ ಚರ್ಚೆಯೇ ಮಾಡದೆ ಒಪ್ಪಿಗೆ ನೀಡಿರುವುದಕ್ಕೆ
ಆಕ್ರೋಶ ವ್ಯಕ್ತಪಡಿಸಿ, ಈ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಡಳಿತ ಪಕ್ಷದ ಸದಸ್ಯರು ದಸರಾ ಸಭೆ ನಡೆಸುವಂತೆ ಒತ್ತಾಯಿಸಿದರು. ಇದರಿಂದ ಅರ್ಧಗಂಟೆಗೂ ಹೆಚ್ಚುಕಾಲ ಬಿಜೆಪಿ ಮತ್ತು ಜೆಡಿಎಸ್, ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಮಹಾನಗರ ಪಾಲಿಕೆಗಳ 9 ಮೇಯರ್‌ಗಳಿಗೆ ಆಹ್ವಾನ ನೀಡಲಾಗಿದೆ. ಆಯುಕ್ತರು ಸೂಕ್ತ ವ್ಯವಸ್ಥೆ
ಕಲ್ಪಿಸುವಂತೆ, ಜಿಲ್ಲಾಧಿಕಾರಿಗಳಿಗೆ ಪಾಸ್ ನೀಡುವಂತೆ ಕೋರಲಾಗಿದೆ. ಅಧಿಕಾರಿಗಳು ಸದಸ್ಯರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು.
●ಶಿವಕುಮಾರ್, ಮೇಯರ್