Advertisement

ಮಳೆಗಾಲಕ್ಕೆ  ಕ್ಷಣಗಣನೆ: ಕೊಡೆ, ರೈನ್  ಕೋಟ್‌ಗಳಿಗೆ ಹೆಚ್ಚಿದ ಬೇಡಿಕೆ

11:30 AM Jun 01, 2018 | |

ಮಹಾನಗರ: ಮಳೆಗಾಲ ಎಂದರೆ ಮೊದಲು ನೆನಪಿಗೆ ಬರುವುದೇ ಕೊಡೆ, ರೈನ್‌ ಕೋಟ್‌. ಮಳೆಗಾಲದಲ್ಲಿ ಕೊಡೆ ಬಿಟ್ಟವ ಕೆಟ್ಟ ಎಂಬ ಗಾದೆಯೇ ಇದೆ. ಮಳೆ ನಿಂತ ಮೇಲೆ ಮೂಲೆ ಸೇರಿದ ಕೊಡೆಗಳು ಮತ್ತೆ ಪ್ರತ್ಯಕ್ಷವಾಗುವುದು ಮಳೆ ಪ್ರತ್ಯಕ್ಷವಾದ ಬಳಿಕವೇ!

Advertisement

ಇನ್ನೂ ಹೊಸ ಕೊಡೆಗಳ ಖರೀದಿಯ ಬಗ್ಗೆ ಹೇಳುವುದೇ ಬೇಡ. ಮಳೆಗಾಲ ಆರಂಭದಲ್ಲಿ ಎಲ್ಲ ಅಂಗಡಿಗಳಲ್ಲೂ ಕೊಡೆ, ರೈನ್‌ಕೋಟ್‌ಗಳು ಮೊದಲ ಪ್ರಾಶಸ್ತ್ಯ  ಪಡೆದುಕೊಂಡಿರುತ್ತದೆ. ತರೇವಾರಿ ಕೊಡೆಗಳ ಸಾಲು ಮಾರುಕಟ್ಟೆಯುದ್ದಕ್ಕೂ ಕಂಗೊಳಿಸುತ್ತದೆ. ಮಳಿಗೆಗಳಲ್ಲಿ ಹಿಡಿಗಾತ್ರದಿಂದ ಉದ್ದಕೋಲಿನವರೆಗೆ ಬಣ್ಣ ಬಣ್ಣದ ಕೊಡೆಗಳ ಸಾಲುಸಾಲು. ಸಾಂಪ್ರಾದಾಯಿಕ ಕೊಡೆಗಳಿಂದ ಆಧುನಿಕ ಫ್ಯಾಶನ್‌ ಕೊಡೆಗಳವರೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತಹ ಕೊಡೆ, ರೈನ್‌ಕೋಟ್‌ಗಳ ಖರೀದಿ ಭರಾಟೆ ಹೆಚ್ಚುತ್ತಿದೆ.

ಮುಂಗಾರು ಆರಂಭದ ತವಕದಲ್ಲಿರುವ ಮಂಗಳೂರಿನಲ್ಲಿ ಇದೀಗ ಕೊಡೆ, ರೈನ್‌ಕೋಟ್‌ ವ್ಯಾಪಾರವೂ ಜೋರಾಗಿದೆ. ಮಂಗಳವಾರ ಸುರಿದ ಭಾರೀ ಮಳೆಯಿಂದ ನಗರ ಜೀವನ ಆಸ್ತವ್ಯಸ್ತ ಆಗಿದ್ದರೂ ಮುಂದಿನ ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ಜನರು ಕೊಡೆ, ರೈನ್‌ಕೋಟ್‌ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊಡೆ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.

ಮಳೆಗಾಲ ಮುಂಚಿತವಾಗಿ ಕೊಡೆ, ರೈನ್‌ ಕೋಟ್‌ ಖರೀದಿಸಿ ದವ ರು ಈಗ ನಿರಾಳವಾಗಿರಬಹುದು. ಮಳೆ ಆರಂಭಗೊಂಡ ಬಳಿಕ ಖರೀದಿಗೆ ತೆರಳುವವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಯಾಕೆಂದರೆ ಮಳೆ ಆರಂಭವಾದ ಬಳಿಕ ಕೊಡೆ, ರೈನ್‌ಕೋಟ್‌ ಅವಶ್ಯವಾಗಿರುವುದರಿಂದ ಅಂಗಡಿ ಮಾಲಕರು ಆದರ ಬೆಲೆಯನ್ನು ದಿಢೀರ್‌ ಏರಿಸುತ್ತಾರೆ. ಹಾಗಾಗಿ ಮಳೆಗಾಲದಲ್ಲಿ ಅವಶ್ಯವಾಗಿರುವ ಕೊಡೆ, ರೈನ್‌ ಕೋಟ್‌ಗಳ ಲಾಭವನ್ನು ಅಂಗಡಿ ಮಾಲಕರು ಪಡೆದುಕೊಳ್ಳುತ್ತಿದ್ದಾರೆ.

ದುಬಾರಿಯಾದರೂ ಬ್ರ್ಯಾಂಡೆಡ್ ರೈನ್‌ ಕೋಟ್‌ಗಳಿಗೆ ಬೇಡಿಕೆ ಹೆಚ್ಚು
ಒಮ್ಮೆ ದುಬಾರಿ ಹಣ ಕೊಟ್ಟು ಬ್ರ್ಯಾಂಡೆಡ್ ಕೊಡೆ, ರೈನ್‌ಕೋಟ್‌ ಖರೀದಿಸಿದರೆ ಸುಮಾರು 5 ವರ್ಷಗಳ ಕಾಲ ಮತ್ತೆ ಕೊಡೆ, ರೈನ್‌ಕೋಟ್‌ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜನರು ಅವುಗಳತ್ತ ಹೆಚ್ಚು ಒಲವು ತೋರಿಸುತ್ತಾರೆ. ಅದಕ್ಕೆ ಇದರ ಬೆಲೆಯೂ ಕೊಂಚ ದುಬಾರಿಯಾಗಿದೆ. ವಿವಿಧ ಬ್ರ್ಯಾಂಡೆಡ್  ಕೊಡೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಣ್ಣ ಕೊಡೆಗಳು 300 ರೂ. ನಿಂದ ಆರಂಭಗೊಂಡು 450 ರೂ. ಬೆಲೆ ಹೊಂದಿದ್ದು, ದೊಡ್ಡ ಕೊಡೆಗಳು ಇದರಿಂದ ಕೊಂಚ ದುಬಾರಿಯಾಗಿದೆ.

Advertisement

ರಸ್ತೆ ಬದಿಗಳಲ್ಲಿ ಕೊಡೆ, ರೈನ್‌ಕೋಟ್‌
ಮಳಿಗೆಗಳಲ್ಲಿ ಮಾತ್ರವಲ್ಲದೆ ನಗರದ ಮುಖ್ಯ ರಸ್ತೆಗಳ ಬದಿಗಳಲ್ಲಿ ಹಾಗೂ ಹೆದ್ದಾರಿ ರಸ್ತೆ ಬದಿಗಳಲ್ಲಿ ಕೊಡೆ, ರೈನ್‌ ಕೋಟ್‌ಗಳ ಮಾರಾಟ ಜೋರಾಗಿದೆ. ಹೆದ್ದಾರಿ ಬದಿಗಳಲ್ಲಿ ಬಣ್ಣ ಬಣ್ಣದ ಕೊಡೆ ಹಾಗೂ ರೈನ್‌ಕೋಟ್‌ಗಳು ಕಣ್ಣಿಗೆ ಬೀಳುತ್ತಿವೆ. ಅಂಗಡಿಗಳಲ್ಲಿ ಲಭಿಸುವ ಬೆಲೆಗಿಂತ ಇಲ್ಲಿ ತುಸು ಕಡಿಮೆಗೆ ದೊರೆಯುವುದರಿಂದ ಜನರು ಈ ಕೊಡೆ, ರೈನ್‌ ಕೋಟ್‌ಗಳ ಖರೀದಿಯತ್ತ ಆಕರ್ಷಿತರಾಗುತ್ತಿದ್ದಾರೆ. 

ಈಗ ವ್ಯಾಪಾರ ಪರವಾಗಿಲ್ಲ
ಮಳೆಗಾಲ ಆರಂಭವಾಗುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ವ್ಯಾಪಾರ ನಡೆಯುತ್ತಿದೆ. ಮಂಗಳವಾರದ ಮಳೆ ಅಕ್ಷರಶಃ ನಮ್ಮನ್ನು ಗಾಬರಿ ಪಡಿಸಿತ್ತು. ಈಗ ಪರವಾಗಿಲ್ಲ. ವ್ಯಾಪಾರ ನಡೆಯುತ್ತಿದೆ. 
– ಮೆಹತ್‌ ಅಲಿ, ಕೊಡೆ ವ್ಯಾಪಾರಿ

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next