ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಕರಾವಳಿಯ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ ಕ್ರೀಡಾಕೂಟದ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಕೋಣಗಳು ಕುಡಿಯುವ ನೀರಿನ ಹಾಗೂ ಟ್ರ್ಯಾಕ್‌ನ ಮಣ್ಣಿನ ಪರೀಕ್ಷೆಯ ವರದಿ ಶನಿವಾರ ಆಯೋಜಕರ ಕೈಸೇರಿದೆ. ಮೈಸೂರು ಮಹಾರಾಣಿ ಅವರಿಂದ ಲಿಖೀತ ಅನುಮತಿ ದೊರೆತ ತಕ್ಷಣವೇ ಸಿದ್ಧತೆ ಪ್ರಾರಂಭವಾಗಲಿದೆ.
ಕಳೆದೆರಡು ವಾರಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಜಯ ಚಾಮರಾಜೇಂದ್ರ ಕೆರೆಯ ನೀರನ್ನು ಕೋಣಗಳಿಗೆ ಕುಡಿಯಲು ಸೂಕ್ತವೇ ಎನ್ನುವ ಕುರಿತು ನೀರಿನ ಮಾದರಿಯನ್ನು ಬೆಂಗಳೂರು ಹಾಗೂ ಪುಣೆ ಲ್ಯಾಬ್‌ಗ ರವಾನಿಸಿದ್ದು, ಅದರ ವರದಿ ಪ್ರಸ್ತುತ ಕೈಸೇರಿದ್ದು, ಕೋಣಗಳ ಸೇವನೆಗೆ ಯಾವುದೇ ತೊಂದರೆಯಿಲ್ಲ ಎನ್ನುವುದಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದರಿಂದಾಗಿ ಕೋಣಗಳಿಗೆ ತುರ್ತು ಅಗತ್ಯವಿರುವ ನೀರಿನ ಹಾಗೂ ಕೆರೆಯ ಸಮಸ್ಯೆ ಪರಿಹಾರ ಸಿಕ್ಕಿದೆ.
ರೈಲು ಏರುವುದೇ ಕೋಣ: ಉಡುಪಿ-ಮಂಗಳೂರಿನಿಂದ ಕೋಣಗಳನ್ನು ಯಾವುದರಲ್ಲಿ ಸಾಗಿಸಬೇಕು ಎನ್ನುವ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರವಾಗಿಲ್ಲ. ಕೋಣಗಳ ಮಾಲೀಕರು ಲಾರಿಯಲ್ಲಿ ಕೋಣಗಳನ್ನು ಬೆಂಗಳೂರಿಗೆ ತರುವ ಇರಾದೆ ಇದೆ. ಈ ವೇಳೆ ಹಾಸನದಲ್ಲಿ ಒಂದು ದಿನ ತಂಗುವ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಮನವಿ ಇದೆ. ಆದರೆ, ಇದಕ್ಕೆ ಪೂರಕವಾದ ವ್ಯವಸ್ಥೆಗೆ ಕಷ್ಟ ಸಾಧ್ಯವಾಗುವ ಹಿನ್ನಲೆಯಲ್ಲಿ ಗೂಡ್ಸ್ ರೈಲಿನಲ್ಲಿ ಕೋಣ ಸಾಗಿಸುವ ಬಗ್ಗೆ ಕೋಣ ಮಾಲೀಕರನ್ನು ಮನವೋಲಿಸಲಾಗುತ್ತಿದ್ದಾರೆ.
ಲಿಖಿತ ಅನುಮತಿ: ಮೈಸೂರು ಮಹಾರಾಣಿ ಅವರು ಕಂಬಳ ನಡೆಸಲು ಈಗಾಗಲೇ ಮೌಖೀಕ ವಾಗಿ ಅನುಮತಿ ನೀಡಿದ್ದಾರೆ. ಅವರದಿಂದ ಲಿಖೀತ ಅನುಮತಿ ದೊರೆತ ತಕ್ಷಣವೇ ಕೋಣ ಮಾಲೀಕರ ಜತೆ ಮಾತುಕತೆ ನಡೆಯಲಿದೆ. ಜತೆಗೆ ಅರಮನೆ ಮೈದಾನದ ಹಾಲ್‌ಗಳನ್ನು ಬುಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಕರಾವಳಿ ಕಂಬಳದಲ್ಲಿ 220 ಜೋಡಿ ಕೋಣಗಳು ಭಾಗವಹಿಸುತ್ತದೆ. ಬೆಂಗಳೂರಿನ ಕಂಬಳದಲ್ಲಿ ಬಲಿಷ್ಠವಾದ ಕೋಣಗಳನ್ನು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕಂಬಳಕ್ಕೆ ರಾಜರ ಹೆಸರು: ಪ್ರಸ್ತುತ “ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆ ಯರ್ ಜೊಡುಕೆರೆ ಕಂಬಳ’ಎನ್ನುವ ಹೆಸರಿಡುವ ಬಗ್ಗೆ ನಿರ್ಧಾರಿಸಲಾಗಿದೆ. 2 ಲಕ್ಷ ಪ್ರೇಕ್ಷಕರು ಕಂಬಳ ವೀಕ್ಷಣೆಗೆ ಆಗಮಿಸುವ ಸಾಧ್ಯತೆ ಇದೆ. ನವೆಂಬರ್ ಪ್ರಾರಂಭದಲ್ಲಿ ಕಂಬಳ ಆಯೋಜಿಸುವ ಸಾಧ್ಯತೆಯಿದ್ದು ದಿನಾಂಕ ಇನ್ನೂ ನಿಗದಿ ಪಡಿಸಿಲ್ಲ.