Advertisement

ಅಲೆಮಾರಿಗಳ ಸಮಸ್ಯೆ ಆಲಿಸಿದ ಪರಿಷತ್‌ ಸದಸ್ಯ ಅರಳಿ

02:57 PM Jul 19, 2022 | Team Udayavani |

ಔರಾದ: ಅಲೆಮಾರಿ ಕುಟುಂಬದ ನಿವಾಸಿಗಳಿಗೆ ಮೂರು ತಿಂಗಳಲ್ಲಿ ವಸತಿ ನಿರ್ಮಾಣ ಮಾಡಿ ಕೊಡಲು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕೆಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಆಗ್ರಹಿಸಿದ್ದಾರೆ.

Advertisement

ಪಟ್ಟಣದ ಅಲೆಮಾರಿ ಕುಟುಂಬದ ನಿವಾಸಿಗಳು ವಾಸವಾಗಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಹಲವು ದಶಕಗಳಿಂದ ಪಟ್ಟಣದಲ್ಲಿಯೇ ಅಲೆಮಾರಿ ಕುಟುಂಬದ ನಿವಾಸಿಗಳು ವಾಸವಾಗಿದ್ದಾರೆ. ಕೆಸರು ಗದ್ದೆಯಂದಾಗಿರುವ ಸ್ಥಳದಲ್ಲಿಯೇ ವಾಸವಾಗಿರುವ ನಿವಾಸಿಗಳನ್ನು ನೋಡಿದರೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಆದರೂ ಈ ಭಾಗದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಮತ್ತು ತಾಲೂಕು ಆಡಳಿತ ಮುಗ್ದ ಜನರ ಸಮಸ್ಯೆ ಆಲಿಸಿ ಬಗೆಹರಿಸದೆ ಇರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

230 ಕುಟುಂಬಸ್ಥರು ನೀರಿನಲ್ಲಿಯೇ ವಾಸವಾಗಿದ್ದಾರೆ. ಕಣ್ಣಿದ್ದು ಕುರುಡರಂತೆ ಕುಳಿತುಕೊಳ್ಳಲು ಕಾರಣವೇನೆಂದು ಬಿಸಿಎಂ ತಾಲೂಕು ಅಧಿಕಾರಿ ಸಂಗೀತಾ ಬಿರಾದರಗೆ ತರಾಟೆಗೆ ತೆಗೆದುಕೊಂಡರು. ಸ್ಥಳದ ಸಮಸ್ಯೆಯಿತ್ತು. ಈಗ ಬಗೆ ಹರಿಸಲಾಗಿದೆ. ನಮ್ಮ ಇಲಾಖೆಯಿಂದ ನಡೆದ ಸರ್ವೇಯಲ್ಲಿ 165 ನಿವಾಸಿಗಳಿದ್ದು, ಈ ಪೈಕಿ ಎಸ್ಸಿ, ಎಸ್‌ಟಿ 40 ಕುಟುಂಬಗಳಿದ್ದು, ಇಲಾಖೆಯಿಂದ ಅವರಿಗೆ ವಸತಿ ನೀಡಲು ಬರುವುದಿಲ್ಲ. ಉಳಿದ 124 ಕುಟುಂಬಸ್ಥರಿಗೆ ಮನೆ ನೀಡಲಾಗುತ್ತದೆ. ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಪಟ್ಟಿ ನೀಡಲಾಗಿದೆ. ಎರಡು ದಿನಗಳಲ್ಲಿ ದೃಢಿಕರಣ ಮಾಡಿ ನಮಗೆ ಅರ್ಹ ಫಲಾನುಭವಿಗಳ ಪಟ್ಟಿ ನೀಡುತ್ತಾರೆ. ಅವರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ ಎಂದು ಬಿಸಿಎಂ ಅಧಿಕಾರಿ ಭರವಸೆ ನೀಡಿದ್ದಾರೆ.

ವೋಟಿಗೆ ನಾವು ಬೇಕು: ಪ್ರತಿಯೊಂದು ಚುನಾವಣೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷದವರು ನಮಗೆ ಇಲ್ಲ-ಸಲ್ಲದ ಸುಳ್ಳು ಹುಸಿ ಭರವಸೆ ನೀಡುತ್ತಾರೆ. ನಮ್ಮಿಂದ ಮತಗಳನ್ನು ಪಡೆದುಕೊಂಡ ನಂತರ ನಮ್ಮನ್ನು ದೂರ ಮಾಡುತ್ತಾರೆ. ಹೀಗಾಗಿಯೇ ನಾವು ರಾಜಕೀಯ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದೇವೆಂದು ಅಲೆಮಾರಿಗಳು ತಿಳಿಸಿದರು.

ಬೇರೆ ರಾಜಕೀಯ ವ್ಯಕ್ತಿಗಳಂತೆ ನಾವುಗಳಲ್ಲ. ಬಡ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಇನ್ನೂ ಮುಂದೆ ನಿಮ್ಮ ಕಷ್ಟಗಳು ಏನಾದ್ರೂ ಇದ್ದರೆ ನನಗೆ ದೂರವಾಣಿ ಮೂಲಕ ತಿಳಿಸಿ. ಬಗೆಹರಿಸುವ ಪ್ರಯತ್ನ ಮಾಡುತ್ತೇನೆಂದು ಅರಳಿ ಭರವಸೆ ನೀಡಿದರು.

Advertisement

ಅಲೆಮಾರಿ ಸಮಾಜದ ಅಧ್ಯಕ್ಷ ನಾಗನಾಥ ವಾಕಡೆ ಮಾತನಾಡಿದರು. ಮಾಜಿ ತಾಪಂ ಉಪಾಧ್ಯಕ್ಷ ನೆಹರು ಪಾಟೀಲ್‌, ಮುಖಂಡ ಡಾ| ಫಯಾಜಲಿ, ದತ್ತಾತ್ರಿ ಬಾಪೂರೆ, ರಾಮಣ್ಣ ವಡೆಯರ್‌, ಅಂಜಾರೆಡ್ಡಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಅಲೆಮಾರಿ ಕುಟುಂಬದ ನಿವಾಸಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next