ಕಳೆದ ಕೆಲ ತಿಂಗಳಿನಿಂದ ತನ್ನ ಟೈಟಲ್ ಪೋಸ್ಟರ್, ಟೀಸರ್ ಮೂಲಕ ಸಿನಿ ಪ್ರಿಯರ ಗಮನ ಸೆಳೆಯುತ್ತಿರುವ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಅನುಕ್ತ’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸದ್ಯ ತನ್ನ ಪ್ರಮೋಷನಲ್ ಕೆಲಸಗಳಲ್ಲಿ ನಿರತವಾಗಿರುವ “ಅನುಕ್ತ’ ಚಿತ್ರತಂಡ ಜ. 18ರಂದು ತನ್ನ ಟ್ರೇಲರ್‌ಗಳನ್ನು ಹೊರತರಲಿದ್ದು, ಫೆಬ್ರವರಿ 1ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಳ್ಳುತ್ತಿದೆ.
ಇತ್ತೀಚೆಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದ “ಅನುಕ್ತ’ ಚಿತ್ರತಂಡ, ಚಿತ್ರದ ವಿಶೇಷತೆಗಳು ಮತ್ತು ರಿಲೀಸ್ ಪ್ಲಾನಿಂಗ್‌ಗಳ ಕುರಿತು ಮಾತನಾಡಿತು. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶ್ವಥ್ ಸ್ಯಾಮುಯೆಲ್, “ಕರಾವಳಿಯಲ್ಲಿ ನಡೆಯುವ ಭೂತಾರಾಧನೆ ಮತ್ತು ಅದರ ಹಿಂದೆ ನಡೆಯುವ ಕೆಲವು ಘಟನೆಗಳ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಕೆಲವೊಂದು ಸಂಗತಿಗಳು ನಮ್ಮ ಕಣ್ಣಿಗೆ ಕಂಡರೂ, ನಮ್ಮ ಅನುಭವಕ್ಕೆ ಬಂದರೂ, ಅವುಗಳನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಹೀಗೆ ಹೇಳಲಾಗದ ಕೆಲವು ವಿಷಯಗಳ ಚಿತ್ರಣವೇ ಅನುಕ್ತ ಚಿತ್ರ. ಮಾತಿನಲ್ಲಿ ಹೇಳಲಾಗದಂಥದ್ದನ್ನು ಇಲ್ಲಿ ಚಿತ್ರದ ಮೂಲಕ ಹೇಳಿದ್ದೇವೆ’ ಎಂದರು.
ಇನ್ನು “ಅನುಕ್ತ’ ಚಿತ್ರಕ್ಕೆ ಕಾರ್ತಿಕ್ ಅತ್ತಾವರ ಕಥೆಯನ್ನು ಬರೆದಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದಾರೆ. ಈ ಬಗ್ಗೆ ಮಾತನಾಡುವ ಕಾರ್ತಿಕ್ ಅತ್ತಾವರ್, “ಇದೊಂದು ವಿಶೇಷ ಕತೆ. ಆರಂಭದಲ್ಲಿ ಕಿರುತೆರೆಯ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದರಿಂದ ಹೊರಬಂದ ನಂತರ ಏನಾದ್ರೂ ಮಾಡ್ಬೇಕೆನ್ನುವ ತುಡಿತವಿತ್ತು. ಆಗ ಸ್ನೇಹಿತ ಸಂತೋಷ ಕೊಂಚಾಡಿ ಅವರೊಂದಿಗೆ ಸೇರಿ ಕರಾವಳಿ ದೈವಾರಾಧನೆ ಮೇಲೆಯೇ ಒಂದು ಕಥೆ ಮಾಡೋಣ ಅಂತ ವರ್ಕ್ ಶುರು ಮಾಡಿದೆವು. ಒಂದೊಳ್ಳೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡು ಕಥೆ ಬರೆದ. ಆ ಕಥೆಯ ನಾಯಕನ ಪಾತ್ರಕ್ಕೆ ತಕ್ಕಂತಹ ನಟರನ್ನು ಹುಡುಕುವ ಸಾಹಸದಲ್ಲಿ, ಕೊನೆಗೆ ನಾನೇ ಹೀರೋ ಆಗಬೇಕಾಯಿತು’ ಎನ್ನುತ್ತಾರೆ.
ಈ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿ¨ªಾರೆ. ಕಾರ್ತಿಕ್ ಅತ್ತಾವರ್‌ಗೆ ನಾಯಕಿಯಾಗಿ ಸಂಗೀತ ಭಟ್ ಜೊತೆಯಾಗಿದ್ದು, ಬಹುಭಾಷಾ ನಟ ಸಂಪತ್ ರಾಜ್ ಚಿತ್ರದ ಮತ್ತೂಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿಲ್ ಪೌಲ್ ಸಂಗೀತ ನೀಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಉಡುಪಿ ಮೂಲದ ಉದ್ಯಮಿ ಹರೀಶ್ ಬಂಗೇರಾ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಇನ್ನು “ಅನುಕ್ತ’ ಚಿತ್ರವನ್ನು ಕರ್ನಾಟಕದ ಜೊತೆ ಜೊತೆಯಲ್ಲಿಯೇ ಹೊರರಾಜ್ಯಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಚಿತ್ರ ಭಾರತದಲ್ಲಿ ತೆರೆಕಂಡ ಒಂದು ವಾರದ ಬಳಿಕ ವಿದೇಶಗಳಲ್ಲೂ ತೆರೆಕಾಣಲಿದೆ ಎಂದಿದೆ ಚಿತ್ರತಂಡ.
ಒಟ್ಟಾರೆ ತೆರೆಗೆ ಬರೋದಕ್ಕೂ ಮುನ್ನವೇ ಚಿತ್ರರಂಗದಲ್ಲಿ ಮತ್ತು ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮತ್ತು ಭರವಸೆ ಮೂಡಿಸಿರುವ “ಅನುಕ್ತ’ ತೆರೆಯ ಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದು ಫೆಬ್ರವರಿ ಮೊದಲ ವಾರ ಗೊತ್ತಾಗಲಿದೆ.
ಜಿ.ಎಸ್. ಕಾರ್ತಿಕ ಸುಧನ್