Advertisement

ಬಿಜೆಪಿ ಕಾರ್ಯಕರ್ತರಿಂದ ಕೊರೊನಾ ಜಾಗೃತಿ

11:19 PM Mar 14, 2020 | Lakshmi GovindaRaj |

ಬೆಂಗಳೂರು: ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಕೊರೊನಾ ವೈರಸ್‌ ನಿಯಂತ್ರಣದ ಬಗ್ಗೆ ಜಾಗೃತಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಬಿಜೆಪಿ ಕೋರ್‌ ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ರ ಅಧ್ಯಕ್ಷತೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಕೋರ್‌ ಕಮಿಟಿ ಸಭೆಯ ನಂತರ ಮಾಹಿತಿ ನೀಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿರುವ ಕೊರೊನಾ ವೈರಸ್‌ ಬಗ್ಗೆ ಕೋರ್‌ ಕಮಿಟಿಯಲ್ಲಿ ಚರ್ಚಿಸಿದ್ದೇವೆ.

Advertisement

ಬಿಜೆಪಿ ಕಾರ್ಯಕರ್ತರು ಕೊರೊನಾ ನಿಯಂತ್ರಣದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಪ್ರಚಾರ ಕೈಗೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಮುಂಜಾಗೃತ ಕ್ರಮದ ಬಗ್ಗೆ ತಮ್ಮ ತಮ್ಮ ಗುಂಪಿನಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು. ಜಾಗೃತಿ ಕಾರ್ಯಕ್ರಮಗಳು, ಕೊರೊನಾ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಕರಿಸುವುದು, ರಾಜ್ಯದಲ್ಲಿ ಪಕ್ಷದ ವತಿಯಿಂದ ದೊಡ್ಡ ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ಸದ್ಯ ಹಮ್ಮಿಕೊಳ್ಳದಂತೆಯೂ ಸೂಚನೆ ನೀಡಲಾಗಿದೆ ಎಂದರು.

ಶಾಸಕರ ಜತೆ ಸಿಎಂ ಸಭೆ: ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ಆಯಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ವಿಧಾನ ಸಭೆ, ವಿಧಾನ ಪರಿಷತ್‌ ಶಾಸಕರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕರೆಯಲಿದ್ದಾರೆ. ಸಭೆಯಲ್ಲಿ ಸ್ಥಳೀಯ ಮಟ್ಟದ ಬೇಡಿಕೆ, ಅಗತ್ಯ ಅನುದಾನ ಪೂರೈಕೆ ಇತ್ಯಾದಿ ಹಲವು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಶಾಸಕರು ಚರ್ಚೆ ನಡೆಸಲಿದ್ದಾರೆಂದರು.

ಪದಾಧಿಕಾರಿಗಳ ನೇಮಕ: ರಾಜ್ಯದ 2 ಜಿಲ್ಲೆ ಹೊರತುಪಡಿಸಿ ಬಹುತೇಕ ಕಡೆ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಜ್ಯ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಮಾ.31ರೊಳಗೆ ಮುಗಿಸಲು ಸೂಚನೆ ನೀಡಿದ್ದೇವೆ. ಗ್ರಾಪಂ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಮತ್ತು ಸಮಾವೇಶ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದೆ. ಅಲ್ಲದೆ, ಬೂತ್‌ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಉಸ್ತುವಾರಿಗಳ ಸಭೆ ನಡೆಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next