Advertisement

ಪೊಲೀಸರಿಗೆ ಸಹಕಾರ; ಸಮಾಜಕ್ಕೆ ಉಪಕಾರ

10:11 AM Apr 01, 2022 | Team Udayavani |

ಚಿಂಚೋಳಿ: ಪೊಲೀಸರು ಮತ್ತು ಸಾರ್ವಜನಿಕರು ಜೊತೆಯಾಗಿ ಜನಸ್ನೇಹಿ ಕೆಲಸ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಜನರೇ ಪೊಲೀಸರ ಕಣ್ಣು ಮತ್ತು ಕಿವಿ ಇದ್ದಂತೆ. ಆದ್ದರಿಂದ ಅಕ್ರಮ ಚಟುವಟಿಕೆಗಳ ಮಾಹಿತಿ ಕೊಡಬೇಕು. ಅಂದಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಚಿಮ್ಮನಚೋಡ ಗ್ರಾಮದ ಹನುಮಾನ ದೇವಸ್ಥಾನ ಆವರಣದಲ್ಲಿ ಜಿಲ್ಲಾ ಪೊಲೀಸ್‌, ಚಿಂಚೋಳಿ ಉಪ-ವಿಭಾಗ, ಚಿಂಚೋಳಿ ಪೊಲೀಸ್‌ ಠಾಣೆ ವತಿಯಿಂದ ಏರ್ಪಡಿಸಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌’ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ರಮ ಮದ್ಯ ಮಾರಾಟ ದೊಡ್ಡ ಸಮಸ್ಯೆಯಾಗಿದೆ. ಪರವಾನಗಿ ಇದ್ದರೆ ಏನೂ ಮಾಡಲು ಬರುವುದಿಲ್ಲ. ದಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿದರೆ ಸಾಮಾಜಿಕ ಬಹಿಷ್ಕಾರ ಯಾಕೆ ಹಾಕುವುದಿಲ್ಲ? ಪೊಲೀಸರು ನಿಮ್ಮ ಜೊತೆಯಿದ್ದರೂ ಭಯವೇಕೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಅಕ್ರಮದ ಬಗ್ಗೆ ಹೋರಾಟ ನಡೆಸಿದ್ದಾರೆ. ಬಿಹಾರ ರಾಜ್ಯದಲ್ಲಿ ಮಹಿಳೆಯರು ಅಕ್ರಮ ಮದ್ಯ ಮಾರಾಟ ಮಾಡದಂತೆ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಜೂಜಾಟ ಮತ್ತು ಗಾಂಜಾ ಮಾರಾಟ ಮತ್ತು ಕಲಬೆರೆಕೆ ಸೇಂದಿ (ಸಿಎಚ್‌ ಪೌಡರ್‌) ಸಮಸ್ಯೆ ಬಹಳವಿದೆ. ಪೊಲೀಸರು ಜನರ ಸೇವೆಗಾಗೇ ಇದ್ದೇವೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪೊಲೀಸ್‌ ಠಾಣೆಗೆ ಹೋಗಲು ಭಯಪಡಬಾರದು. ಪೊಲೀಸರೇನು ಕಾಡು ಪ್ರಾಣಿಗಳಲ್ಲ, ಜನರು ಭಯಪಡಬಾರದು. ನಂಬಿಕೆ, ವಿಶ್ವಾಸ ಇಡಬೇಕು. ಪೊಲೀಸರು ನಿಮ್ಮ ಸುರಕ್ಷತೆಗೆ ಇದ್ದಾರೆ ಎನ್ನುವ ಭಾವನೆ ಮೂಡಬೇಕು ಎಂದರು.

ಗ್ರಾಮಸ್ಥ ಸಂಗಾರೆಡ್ಡಿ ಮಾತನಾಡಿ, ಗ್ರಾಮದ ಹತ್ತಿರ ಮುಲ್ಲಾಮಾರಿ ನದಿ ಹರಿಯುತ್ತಿದೆ. ಹಗಲು ರಾತ್ರಿ ಎನ್ನದೇ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಉಸುಕು ಸಾಗಿಸಲಾಗುತ್ತಿದೆ. ಇದರ ನಿಯಂತ್ರಣ ಮಾಡಬೇಕು. ವ್ಯವಸಾಯ ಸಹಕಾರಿ ಸಂಘದಲ್ಲಿ ರೈತರ ಹೆಸರಿನ ಮೇಲೆ ಲಕ್ಷಾಂತರ ರೂ. ಅವ್ಯವಹಾರವಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿಗೆ ಮನವಿ ಮಾಡಿದರು.

Advertisement

ಮುಖಂಡ ಸಿರಾಜ ದುಂಬಳಿ ಮಾತನಾಡಿ, ಚೆಟ್ಟಿನಾಡ ಮತ್ತು ಕಲಬುರಗಿ ಸಿಮೆಂಟ್‌ ಟ್ಯಾಂಕರುಗಳು ಅತಿ ವೇಗವಾಗಿ ಚಲಿಸುತ್ತಿರುವುದರಿಂದ ಇದುವರೆಗೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನರನಾಳ ಗ್ರಾಮದಲ್ಲಿ ಲಾರಿ ಹರಿದ ಪರಿಣಾಮವಾಗಿ ದೇಹ ಛಿದ್ರವಾಗಿ ಹೋಗಿತ್ತು. ಇಂತಹ ಅಪಘಾತ ತಡೆಗೆ ಕ್ರಮ ಕೈಗೊಳ್ಳಿ ಎಂದು ಕೋರಿದರು.

ಮುಖಂಡರಾದ ಲಕ್ಷ್ಮಣ ಆವಂಟಿ, ಶರಣರೆಡ್ಡಿ ಮೊಗಲಪ್ಪ ನೋರ, ರಾಮರೆಡ್ಡಿ ಪಾಟೀಲ ಮಾತನಾಡಿ, ಚಿಮ್ಮನಚೋಡ ವಲಯ ಅತಿ ದೊಡ್ಡದಾಗಿದ್ದು 42 ತಾಂಡಾಗಳು 38 ಗ್ರಾಮಗಳು ಇರುವುದರಿಂದ ಹೊಸದಾಗಿ ಪೊಲೀಸ್‌ ಠಾಣೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರಿ ಮಾಡಬೇಕು ಎಂದು ಕೋರಿ ಮನವಿ ಸಲ್ಲಿಸಿದರು.

ಪಿಎಸ್‌ಐ ಮಂಜುನಾಥರೆಡ್ಡಿ, ಸಿಪಿಐ ಮಹಾಂತೇಶ ಪಾಟೀಲ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಿದರು. ಡಿವೈಎಸ್ಪಿ ಬಸವೇಶ್ವರ ಹೀರಾ ಪ್ರಾಸ್ತಾವಿಕವಾಗಿ ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌ ಕಾರ್ಯಕ್ರಮದ ಕುರಿತು ಚಿಮ್ಮನಚೋಡ ಗ್ರಾಮಸ್ಥರಿಗೆ ವಿವರಿಸಿದರು. ತಾಪಂ ಅಧಿಕಾರಿ ಅನಿಲಕುಮಾರ ರಾಠೊಡ, ತಹಶೀಲ್ದಾರ್‌ ಅಂಜುಮ ತಬಸುಮ ಮಾತನಾಡಿದರು.

ಚಿಮ್ಮನಚೋಡ ಗ್ರಾಮದ ದಲಿತ ಓಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದಲಿತ ಮುಖಂಡ, ಶಿಕ್ಷಕ ನಾಗೀಂದ್ರಪ್ಪ ಮಾತನಾಡಿ, ಮಳೆಗಾಲದಲ್ಲಿ ಮುಲ್ಲಾಮಾರಿ ನದಿಯ ನೀರಿನಿಂದ ಪ್ರವಾಹ ಉಂಟಾಗಿ, ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಲು ತೊಂದರೆ ಪಡಬೇಕಾಗಿದೆ. ಆಸ್ಪತ್ರೆಗೆ ಹೋಗಲು ಬರುವುದಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

ನಂತರ ಎಸ್ಪಿ ಚೌಕಿ ತಾಂಡಾಕ್ಕೆ ಭೇಟಿ ನೀಡಿ ಲಂಬಾಣಿ ಮಹಿಳೆಯರ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಪಂ ಅಧ್ಯಕ್ಷ ಚಿನ್ನಿಬಾಯಿ ಮೋತಿರಾಮ ನಾಯಕ, ಪಿಡಿಒ ಗೋವಿಂದರೆಡ್ಡಿ,ಪ್ರಭಾಕರ ಕುಲಕರ್ಣಿ, ಉಪ ತಹಶೀಲ್ದಾರ್‌ ರಮೇಶ ಕೋಲಿ, ರವಿಕುಮಾರ ನಾಯಕ ಭಾಗವಹಿಸಿದ್ದರು. ಡಿವೈಎಸ್ಪಿ ಬಸವೇಶ್ವರ ಹೀರಾ ಸ್ವಾಗತಿಸಿದರು, ರಾಘವೇಂದ್ರ ರೆಡ್ಡಿ ನಿರೂಪಿಸಿದರು, ಮಂಜುನಾಥರೆಡ್ಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next