ಮುಂಬಯಿ: ಕೊರೊನಾ ಎರಡನೇ ಅಲೆ ಮೊದಲ ಅಲೆಗಿಂತ ಗಂಭೀರವಾಗಿದ್ದು, ಈ ಬಿಕ್ಕಟ್ಟನ್ನು ನಿವಾರಿಸಲು ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಅಂಗಸಂಸ್ಥೆ ಕಾಲೇಜುಗಳು ಮುಂದಾಳತ್ವ ವಹಿಸಿ ಆಡಳಿತದೊಂದಿಗೆ ಸಹಕರಿಸಬೇಕು ಎಂದು ರಾಜ್ಯಪಾಲ ಮತ್ತು ಕುಲಪತಿ ಭಗತ್ ಸಿಂಗ್ ಕೋಶ್ಯಾರಿ ಹೇಳಿದರು.
ಎ. 27ರಂದು ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಜ್ಯದ ಎಲ್ಲ ವಿವಿಗಳ ಉಪಕುಲಪತಿಗಳೊಂದಿಗೆ ಆನ್‌ಲೈನ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭ ಭವಿಷ್ಯದ ಯೋಜನೆಗಳ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳು ಕೈಗೊಂಡ ಕ್ರಮಗಳ ಬಗ್ಗೆ ಎಲ್ಲ ಉಪಕುಲ ಪತಿಗಳು ರಾಜ್ಯಪಾಲರಿಗೆ ವಿವರಿಸಿದರು.ರಕ್ತದಾನಕ್ಕೆ ಮಹತ್ವ ನೀಡಿರಕ್ತದಾನದಂತಹ ಚಟುವಟಿಕೆಗಳಲ್ಲಿ ಭಾಗ ವಹಿಸಲು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿದ್ಯಾರ್ಥಿ ಸಂಘಟನೆಗಳಿಗೆ ಸೂಚನೆ ನೀಡಿದ ರಾಜ್ಯಪಾಲರು ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ವಿವಿಗಳಿಗೆ ನಿರ್ದೇಶನ ನೀಡಿದರು.
ನಿರೀಕ್ಷೆ ಪೂರೈಸುವುದು ಕರ್ತವ್ಯಸಮಾಜ ಮತ್ತು ದೇಶವು ವಿವಿಗಳು ಮತ್ತು ಕಾಲೇಜುಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಈ ಕಷ್ಟದ ಸಮಯದಲ್ಲಿ ಸಮಾಜಕ್ಕೆ ಸಹಾಯ ಮಾಡುವುದು ವಿವಿಗಳ ನೈತಿಕ ಕರ್ತವ್ಯವಾಗಿದೆ ಎಂದು ತಿಳಿಸಿದ ರಾಜ್ಯ ಪಾಲರು, ಆಡಳಿತದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವಿವಿಗಳು ಆಡಳಿತಕ್ಕೆ ಸಹಾಯ ಮಾಡಬೇಕು ಎಂದು ಹೇಳಿದರು.
ಸಾರ್ವಜನಿಕವಾಗಿ ಜಾಗೃತಿ ಮೂಡಿಸಿಎಲ್ಲ ಜನರು ಇನ್ನೂ ಮಾಸ್ಕ್ಗಳನ್ನು ಬಳಸದ ಕಾರಣ ಪ್ರತೀದಿನ ಸಾವಿರಾರು ಜನರಿಗೆ ದಂಡ ವಿಧಿಸಲಾಗುತ್ತಿದೆ. ಇದಕ್ಕಾಗಿ ಕಾಲೇಜುಗಳು ಮತ್ತು ವಿವಿಗಳು ಸಾರ್ವಜನಿಕ ಜಾಗೃತಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು.
ಸಾರ್ವಜನಿಕ ಜಾಗೃತಿ ಕೂಡ ಅನೇಕ ಜೀವಗಳನ್ನು ಉಳಿಸುತ್ತದೆ. ಕೊರೊನಾ ತಡೆಗಟ್ಟುವ ಕಾರ್ಯಗಳಿಗಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಹಣವನ್ನು ಸಂಗ್ರಹಿಸುವ ಯೋಜನೆಯನ್ನು ವಿವಿಗಳು ತರಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು. ಮಾಸ್ಕ್ಗಳನ್ನು ತಯಾರಿಸುವುದು ಮತ್ತು ಮಾಸ್ಕ್ಗಳನ್ನು ವಿತರಿಸು ವುದರ ಜತೆಗೆ ಅಗತ್ಯವಿರುವವರಿಗೆ ರಕ್ತ ಸಂಗ್ರಹಿಸಲು ವಿವಿಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ಬಡವರಿಗೆ ವಿವಿಗಳು ಆಹಾರ ಧಾನ್ಯಗಳನ್ನು ವಿತರಿಸಬೇಕು ಎಂದರು.