ಪಾಂಡವಪುರ: ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸವಿತಾ ಸಮುದಾಯ, ಆಟೋ ಚಾಲಕರು ಹಾಗೂ ಛಾಯಾಗ್ರಾಹಕರಿಗೆ ವೈಯಕ್ತಿಕವಾಗಿ ಪಡಿತರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಶಾಸಕ ಪುಟ್ಟರಾಜು ಹೇಳಿದರು.
ಸವಿತಾ ಸಮುದಾಯದ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಸವಿತಾ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ನಮಗೆ ಕ್ಷೌರಿಕ ಅಂಗಡಿಯ ಬಾಗಿಲು ತೆಗೆಯಲು ಅವಕಾಶ ಮಾಡಿಕೊಡಬೇಕು ಎಂದು ಸವಿತಾ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಲಾಕ್‌ಡೌನ್ ನಿಂದಾಗಿ ಸವಿತಾ ಸಮುದಾಯ ಸೇರಿದಂತೆ ಬಡವರೆಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಬಾಗಿಲು ತೆಗೆಯಲು ಅವಕಾಶ ಮಾಡಿಕೊಟ್ಟರೆ ಇದರಿಂದ ಸಮಸ್ಯೆಯಾಗಬಹುದು. ಇಷ್ಟು ದಿನಗಳ ಕಾಲ ತಾಳ್ಮೆಯಿಂದ ಇದ್ದೀರಿ, ಇನ್ನೂ ಸ್ವಲ್ಪದಿನ ಸಹಕರಿಸುವಂತೆ ಹೇಳಿದರು. ಸವಿತಾ ಸಮುದಾಯದ ಎಷ್ಟು ಕುಟುಂಬಗಳಿವೆ ಗುರುತಿಸಿ ಮಾಹಿತಿ ನೀಡುವಂತೆ ತಿಳಿಸಿದ ಶಾಸಕರು, ತಾಲೂಕಿನಲ್ಲಿರುವ ಎಲ್ಲಾ ನೋಂದಾಯಿತ ಆಟೋ ಚಾಲಕರಿಗೆ ಹಾಗೂ ಛಾಯಾಗ್ರಾಹಕರಿಗೂ ಪಡಿತರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಮುಂಬೈನಿಂದ ನುಸುಳಿ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ತಾಲೂಕಿನ ಬಿ.ಕೊಡಗಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾನು ಈ ಹಿಂದೆ ಗ್ರಾಮದ ಎಲ್ಲಾ ಕುಟುಂಬಗಳಿಗೆ ಉಚಿತ ಕಿಟ್ ಗಳನ್ನು ವಿತರಣೆ ಮಾಡಿದ್ದೇನೆ. ಗ್ರಾಮ ಸೀಲ್‌ಡೌನ್ ಆಗಿರುವುದರಿಂದ ಮತ್ತೂಂದು ಬಾರಿ ಗ್ರಾಮಕ್ಕೆ ಪಡಿತರ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಪ್ರಮೋದ್, ತಾಪಂ ಇಒ ಮಹೇಶ್, ಸವಿತಾ ಸಮುದಾಯದ ತಾಲೂಕು ಅಧ್ಯಕ್ಷ ತಿಮ್ಮರಾಜು, ಕಾರ್ಯದರ್ಶಿ ವೆಂಕಟೇಶ್, ಮುಖಂಡ ಜಗನಾಥ್, ಸ್ವಾಮಿ ಹಾಜರಿದ್ದರು.