Advertisement

ಅಪರಾಧಿಗಳ ಪರ ವಕೀಲರು ನನ್ನತ್ತ ಬೆರಳು ತೋರಿಸಿ ಅಪಹಾಸ್ಯ ಮಾಡಿದರು: ನಿರ್ಭಯಾ ತಾಯಿ

09:43 AM Feb 01, 2020 | Hari Prasad |

ನವದೆಹಲಿ: ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ನಾಳೆ ಬೆಳಗ್ಗಿನ ಸೂರ್ಯೋದಯಕ್ಕೂ ಮುನ್ನವೇ ನಿರ್ಭಯಾ ಅತ್ಯಾಚಾರಿ ಪಾಪಿಗಳಿಗೆ ನೇಣು ಕುಣಿಕೆ ಬಿಗಿದಾಗಿರುತ್ತಿತ್ತು ಮತ್ತು ನಿರ್ಭಯಾ ತಾಯಿ ಆಶಾದೇವಿ ಪಾಲಿಗೆ ನಾಳಿನ ಬೆಳಗು ಒಂದು ನಿರಮ್ಮಳ, ನಿಟ್ಟುಸಿರಿನ ಬೆಳಗಾಗುವ ಸಾಧ್ಯತೆಗಳೂ ಇದ್ದವು.

Advertisement

ಆದರೆ ಈ ನಾಲ್ವರು ಪಾತಕಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ ರಾಷ್ಟ್ರಪತಿಗಳಿಗೆ ಕೊನೇ ಕ್ಷಣದಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಿರುವುದರಿಂದ ಅವರಿಗೆ ನಿಗದಿಯಾಗಿರುವ ಮರಣದಂಡನೆ ದಿನಾಂಕವನ್ನು ಮುಂದೂಡಬೇಕೆಂದು ಇವರ ವಕೀಲರು ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಮಾಡಿಕೊಂಡಿರುವ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ. ಈ ಮೂಲಕ ನಿರ್ಭಯಾ ಹಂತಕರು ನೇಣುಗಂಬಕ್ಕೇರುವ ದಿನ ಇನ್ನಷ್ಟು ದೂರವಾದಂತಾಗಿದೆ.

ಆದರೆ ಇದರಿಂದ ಬಹಳ ದುಃಖವಾಗಿದ್ದು ನಿರ್ಭಯಾ ತಾಯಿಗೆ. ತನ್ನ ಪುತ್ರಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿಗಳು ಪ್ರತೀ ಸಲ ಒಂದಲ್ಲ ಒಂದು ಕಾನೂನು ಸೌಲಭ್ಯವನ್ನು ಬಳಸಿಕೊಂಡು ನ್ಯಾಯಾಲಯದ ಮೆಟ್ಟಿಲೇರುವಾಗಲೂ ಈ ತಾಯಿ ಅಲ್ಲೆಲ್ಲಾ ಹಾಜರಾಗುತ್ತಿದ್ದರು. ಮತ್ತು ಈ ಪಾಪಿಗಳಿಗೆ ಇಂದಲ್ಲ ನಾಳೆ ಗಲ್ಲು ಶಿಕ್ಷೆಯಾಗುವುದು ಖಚಿತ ಎಂಬ ಮನಸ್ಥಿತಿಯಲ್ಲೇ ಈ ತಾಯಿ ಪ್ರತೀಬಾರಿ ನ್ಯಾಯಾಲಯದ ಆವರಣದಿಂದ ಹೊರಬರುತ್ತಿದ್ದಾರೆ. ಆದರೆ ಇಷ್ಟು ದಿನವೂ ಈಕೆಗೆ ಸಿಕ್ಕಿದ್ದು ನಿರಾಶೆಯೇ.

ಅದಕ್ಕೂ ಮೇಲಾಗಿ ನಿರ್ಭಯಾ ಪಾತಕಿಗಳು ನೇಣುಗಂಬಕ್ಕೇರಲು ಇನ್ನೇನು ಒಂದು ದಿನವಷ್ಟೇ ಉಳಿದಿದೆ ಎಂಬಂತಿರುವಾಗಲೇ ಅವರ ಪರ ವಕೀಲರು ಆ ದಿನಾಂಕವನ್ನೇ ಮುಂದೂಡುವಲ್ಲಿ ಸಫಲರಾಗಿರುವುದು ಆಶಾದೇವಿಯ ಆತ್ಮಸ್ಥೈರ್ಯವನ್ನೇ ಉಡುಗಿಸಿದೆ. ಈ ನಡುವೆ ಇಂದು ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ನಂತರ ಪಾತಕಿಗಳ ಪರ ವಕಿಲರು ತನ್ನತ್ತ ಬೆರಳು ತೋರಿಸಿ ಅಣಕಿಸಿದ್ದಾರೆ ಎಂಬ ಆರೋಪವನ್ನು ಆಶಾದೇವಿ ಮಾಡಿದ್ದಾರೆ.


‘ಪಾತಕಿಗಳ ಪರ ವಕೀಲರಾಗಿರುವ ಎ.ಪಿ.ಸಿಂಗ್ ಅವರು ಇಂದು ನನ್ನತ್ತ ಬೆರಳು ಮಾಡಿ ಸವಾಲು ಹಾಕಿದ್ದಾರೆ, ಮತ್ತು ತನ್ನ ಕಕ್ಷಿದಾರರ ಗಲ್ಲು ಶಿಕ್ಷೆ ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಕೆಯಾಗಿದೆ ಎಂದು ಆತ ನನಗೆ ಬೆರಳು ತೋರಿಸಿ ಹೇಳಿದರು’ (ಮುಜ್ರಿಮೋಮ್ ಕಿ ವಕೀಲ್ ಎ.ಪಿ.ಸಿಂಗ್ ನೇ ಮುಜ್ಹೇ ಆಜ್ ಉಂಗ್ಲೀ ದಿಖಾ ಕರ್ ಛಾಲೆಂಜ್ ಕಿಯಾ ಕಿ ಯೇ ಫಾಸಿ ಅಬ್ ಅನಂತ್ ಕಾಲ್ ತಕ್ ಟಾಲ್ ಗಯೀ ಹೈ) ಎಂದು ಆಶಾದೇವಿ ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನೋವಿನಿಂದ ಹೇಳಿದರು.

Advertisement

ಇಂದು ನನ್ನ ಭರವಸೆ ಛಿದ್ರವಾಗಿದೆ ಆದರೆ ನನ್ನ ಮಗಳ ಹೀನ ಸಾವಿಗೆ ಕಾರಣರಾದ ಪಾಪಿಗಳು ನೇಣುಗಂಬಕ್ಕೇರುವವರೆಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದು ಆಶಾದೇವಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next