ಧಾರವಾಡ: ಕಾನೂನು ಮೂಲಕ ವಿಶ್ವದಲ್ಲಿ ಶಾಂತಿ ಸ್ಥಾಪಿಸುವುದು ಅಸಾಧ್ಯವಾಗಿದ್ದು, ಜನರ ಮನಪರಿವರ್ತನೆ ಅಗತ್ಯವಿದೆ ಎಂದು ಕಾನೂನು ವಿವಿಯ ಕುಲಪತಿ ಡಾ| ಸಿ.ಎಸ್. ಪಾಟೀಲ ಹೇಳಿದರು. ಇಲ್ಲಿಯ ಯಾಲಕ್ಕಿ ಶೆಟ್ಟರ ಕಾಲೋನಿಯ ಬಸವಶಾಂತಿ ಮಿಷನ್ ಸೌಹಾರ್ದ ಭವನದಲ್ಲಿ ರವಿವಾರ ಆಯೋಜಿಸಿದ್ದ ಶಾಸ್ತ್ರೀಯ ವಾದ್ಯಗಳ ಸಂಗೀತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ತೊಡಲು ವಸ್ತ್ರವೇ ಇಲ್ಲದ ಕಾಲಘಟ್ಟದಲ್ಲಿ ಅಣ್ವಸ್ತ್ರ ತಯಾರಿಕೆ ತುಂಬಾ ಅಪಾಯಕಾರಿ. ಇದರಿಂದ ಯಾರಿಗೂ ನೆಮ್ಮದಿ ಇಲ್ಲ. ಹೀಗಾಗಿ ವಿಶ್ವದ ಮನುಕುಲವೇ ಭಯ ಭೀತಿಯಲ್ಲಿದೆ. ವಿಶ್ವಶಾಂತಿಗೆ ರಾಷ್ಟ್ರಗಳು ಒಗ್ಗೂಡಬೇಕು. ಮನುಕುಲ ಭಯ ಹಾಗೂ ಹಸಿವು ಮುಕ್ತವಾದಾಗ ರಾಷ್ಟ್ರಗಳ ಅಭಿವೃದ್ಧಿ ಸಾಧ್ಯ.
ವಿಶ್ವದ ಶಾಂತಿಗಾಗಿ ಬಸವಶಾಂತಿ ಮಿಷನ್ ಸಂಗೀತ ಸಮಾವೇಶ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ. ಆಧುನಿಕ ಒತ್ತಡದ ಬದುಕಿನಿಂದ ಬಸವಳಿದ ಮನಕ್ಕೆ ಸಂಗೀತ ಆಲಿಕೆಯೇ ದಿವ್ಯ ಔಷಧ. ಸಂಗೀತಕ್ಕೆ ನೋವು ಮರೆಸುವ ಶಕ್ತಿಯಿದೆ ಎಂದರು. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಎಸ್.ಕೆ. ರಂಗಣ್ಣವರ ಮಾತನಾಡಿ, ಕಣ್ಣು ಕಾಣದ, ಕಿವಿ ಕೇಳದವರು ಸಂಗೀತದ ಮೂಲಕ ಜಗತ್ತಿಗೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
ಸಂಗೀತ ಮನಸ್ಸುಗಳಿಗೆ ಆನಂದ ನೀಡುವುದರ ಜೊತೆಗೆ ಮನಸ್ಸಿನ ಕಲ್ಮಶಗಳನ್ನು ತೊಳೆಯುತ್ತದೆ ಎಂದು ಹೇಳಿದರು. ಜಗತ್ತಿನ ಯಾವುದೇ ಧರ್ಮ ಹಿಂಸೆ ಮಾಡುವಂತೆ ಹೇಳಿಲ್ಲ. ಬುದ್ಧ, ಅಂಬೇಡ್ಕರ್, ಮಹಾತ್ಮಗಾಂ ಧಿ ವಿಶ್ವದ ಶಾಂತಿಗೆ ಹಗಲಿರುಳು ದುಡಿದರು.
ಬಸವಣ್ಣ ವಚನಗಳ ಮೂಲಕ ಜನರನ್ನು ಎಚ್ಚರಿಸಿ, ಸಕಲ ಜೀವರಾಶಿಗಳಿಗೂ ಲೇಸು ಬಯಿಸಿದ ಪುಣ್ಯಾತ್ಮ ಎಂದರು. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಶಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಿದ್ದರು. ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿದರು.
ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ, ಬಸವ ಸಮಿತಿ ಸಂಕರ್ಪ ಅಧಿ ಕಾರಿ ಪಿ.ಎನ್. ರುದ್ರಪ್ಪ, ಸಾಹಿತಿ ರಂಜಾನ ದರ್ಗಾ, ಚಂದ್ರಕಾಂತ ಬೆಲ್ಲದ, ಫಾದರ್ ಪ್ರಶಾಂತ ಇದ್ದರು. ಡಾ| ಶಂಭು ಹೆಗಡಾಳ ಸ್ವಾಗತಿಸಿದರು. ಮಹಾದೇವಿ ದೊಡಮನಿ ನಿರೂಪಿಸಿದರು, ಡಾ| ಪ್ರೀಯಾ ಸರದೇಸಾಯಿ ವಂದಿಸಿದರು. ಹಿರಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.