ದೊಡ್ಡಬಳ್ಳಾಪುರ: ಯಾವುದೇ ಧರ್ಮಕ್ಕೆ ಮತಾಂತರಗೊಳ್ಳುವ ಪ.ಜಾತಿ ಪಂಗಡ, ಜನರಿಗೆ ಮೀಸಲಾತಿ ಅಡಿಯಲ್ಲಿ ಸರ್ಕಾರ ನೀಡುವ ಎಲ್ಲ ಸೌಲಭ್ಯ ರದ್ದುಗೊಳಿಸಬೇಕು ಎಂದು ಭಾರತೀಯ ಬೋವಿ ಸಮಾಜ ಸೇವಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಓಬದೇನಹಳ್ಳಿ ಕೆ.ಮುನಿಯಪ್ಪ ಆಗ್ರಹಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆಯಲು ಕಠಿಣ ಕಾನೂನು ತರಬೇಕು. ಮತಾಂತರದ ಬಗ್ಗೆ ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ, ಹೆಚ್ಚಿನ ಭದ್ರತೆ ನೀಡಬೇಕು. ತಾಲೂಕಿನ ಓಬದೇನಹಳ್ಳಿಗ್ರಾಮದಲ್ಲಿ ಪ.ಜಾತಿಗೆ ಸೇರಿರುವ 30 ಕುಟುಂಬ ಇತರೆ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮತಾಂತರ ಆಗಿರುವ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಕಡಿತ ಮಾಡಬೇಕು ಎಂದರು.
ಇದನ್ನೂ ಓದಿ:- ಕರ್ನಾಟಕ “ಸುಜಲಾಂ ಸುಫಲಾಂ’ ಮಾಡಲು ಸಿದ್ಧ
ವರ್ಗಾವಣೆ ಖಂಡನೀಯ: ರಾಜ್ಯದಲ್ಲಿ ಬೋವಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿ ಒಂದು ವರ್ಷ ಕಳೆಯುತ್ತ ಬಂದಿದ್ದರೂ, ಇದುವರೆಗೂ ನಿಗಮಕ್ಕೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಿಲ್ಲ. ಜನಾಂಗವನ್ನು ಆರ್ಥಿಕವಾಗಿ ಮೇಲೆತ್ತುವ ಸಲುವಾಗಿ ಆರಂಭಿಸಲಾಗಿರುವ ನಿಗಮಕ್ಕೆ ಸರ್ಕಾರ ಹಣಕಾಸಿನ ನೆರವು ನೀಡಬೇಕು. ದೇವನಹಳ್ಳಿ ತಾಲೂಕಿನ ಬೀರಸಂದ್ರದಲ್ಲಿನ ಡೀಸಿ ಕಚೇರಿಯಲ್ಲಿದ್ದ ಬೋವಿ ಜನಾಂಗ ನಿಮಗದ ಕಚೇರಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿರುವುದು ಖಂಡನೀಯ.
ತಕ್ಷಣ ಜಿಲ್ಲೆಯ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರ ಮಾಡಬೇಕು. ಬೋವಿ ಜನಾಂಗದ ಕುಲ ಕಸುಬಾಗಿರುವ ಕಲ್ಲು ಬಂಡೆ ಕೆಲಸವನ್ನು ಬೋವಿ ಜನಾಂಗಕ್ಕೆ ನೀಡಬೇಕು ಎಂದರು. ಬೋವಿ ಜನಾಂಗ ಸಂಘದ ನಗರ ಘಟಕದ ಅಧ್ಯಕ್ಷ ಟಿ.ಬಸವರಾಜು, ದೇವನಹಳ್ಳಿ ತಾಲೂಕು ಅಧ್ಯಕ್ಷ ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷ ಗಂಗರಾಜು, ಕಾರ್ಯದರ್ಶಿ ರಾಮಾಂಜಿನೇಯಲು, ರಾಜ್ಯ ಉಪಾಧ್ಯಕ್ಷ ರಮೇಶ್, ಖಜಾಂಚಿ ವೀರಪ್ಪ ಇದ್ದರು.