ಬೆಂಗಳೂರು: ರಾಜ್ಯದಲ್ಲಿ ಒಳ ಮೀಸಲಾತಿ ಕೂಗು ದಿನೇದಿನೆ ಹೆಚ್ಚುತ್ತಿದೆ. ಈ ಸಂಬಂಧ ರಾಜ್ಯ ಸರಕಾರದ ಮೇಲೆ ಒತ್ತಡಗಳೂ ಬರುತ್ತಿವೆ. ಇನ್ನು ಬುಧವಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಕಾರವಾರದಲ್ಲಿ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಯಿತು.
ರಾಯಚೂರಿನಲ್ಲಿ ಎಸ್ಸಿ ಒಳ ಮೀಸಲಾತಿ ಜಾರಿ ಐಕ್ಯ ಹೋರಾಟ ಸಮಿತಿಯಿಂದ ಬುಧವಾರ ಜಿಲ್ಲಾ ಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಈ ವೇಳೆ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾ ರೆ. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಮಾಡುವವರೆಗೂ ಯಾವುದೇ ರೀತಿಯ ಹುದ್ದೆ ಗಳ ಭರ್ತಿ ಮಾಡಬಾರದು ಎಂದು ಆಗ್ರಹಿಸಲಾಗಿದೆ.
ಹಾಸನದಲ್ಲಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ಮತ್ತು ದಲಿತ ಸಂಘರ್ಷ ಸಮಿತಿ ಒಕ್ಕೂಟವು ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ. ಮೈಸೂರಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪದಾಧಿಕಾರಿಗಳು ಪುರಭವನ ಆವರಣದಲ್ಲಿ ಪ್ರತಿಭಟಿಸಿದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಂಡ್ಯದಲ್ಲಿ ಮಾದಿಗರ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಆಕ್ರೋಶವನ್ನು ಹೊರಹಾಕಿವೆ.