ಉಡುಪಿ: ನಗರದಲ್ಲಿ ನೇರಳೆ ಹಣ್ಣು ಲಗ್ಗೆ ಇಟ್ಟಿದೆ. ಕೆಲವು ದಿನಗಳಿಂದ ನಗರದ ಹೃದಯ ಭಾಗದಲ್ಲಿ ಎಸ್‌ವಿಸಿ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್, ಗುಂಡಿಬೈಲು, ಕೃಷ್ಣಮಠ ರಥಬೀದಿ, ಬಸ್‌ನಿಲ್ದಾಣ ಸಮೀಪ ವ್ಯಾಪಾರಿಗಳು ನೇರಳೆ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ನಗರದಲ್ಲೀಗ ನೇರಳೆ ಹಣ್ಣಿನ ಆಕರ್ಷಣೆಯಾಗಿದ್ದು, ದುಂಡನೆ ರುಚಿಕರವಾಗಿರುವ ಹಣ್ಣು ಬಾಯಲ್ಲಿ ನೀರೂರಿಸುವಂತಿದೆ.
ಮೇ, ಜೂನ್‌ನಲ್ಲಿ ಹೆಚ್ಚಾಗಿ ಮಾರುಕಟ್ಟೆಯಲ್ಲಿ ದೊರೆಯುವ ಈ ಹಣ್ಣಿಗೆ ಗ್ರಾಹಕರು ಮುಗಿಬೀಳುತ್ತಾರೆ. ಉಡುಪಿಯಲ್ಲಿ ಕಳೆದ 15 ದಿನಗಳಿಂದ ಸ್ಥಳೀಯ ವ್ಯಾಪಾರಿಗಳು ನೇರಳೆ ಹಣ್ಣಿನ ಮಾರಾಟ ಆರಂಭಿಸಿದ್ದಾರೆ. ಬೆಳಗಾವಿ, ಯಲ್ಲಾಪುರ ಭಾಗದಿಂದ ನೇರಳೆ ಹಣ್ಣನ್ನು ತಂದು ಇಲ್ಲಿ ಮಾರಾಟ ಮಾಡುತ್ತಾರೆ. ಕಳೆದ ಬಾರಿ ವ್ಯಾಪಾರ ಕಡಿಮೆ ಇತ್ತು. ಈ ವರ್ಷ ಸ್ವಲ್ಪ ಉತ್ತಮವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ನೇರಳೆ ಹಣ್ಣು ಒಂದೆಡೆ ಕೆ.ಜಿ.ಗೆ 200ರಿಂದ 250 ರೂ. ವರೆಗೆ ಮಾರುತ್ತಾರೆ. ನಗರದ ತರಕಾರಿ, ಹಣ್ಣು ಮಾರಾಟದ ಕೆಲವು ಮಳಿಗೆಗಳಲ್ಲೂ ನೇರಳೆ ಹಣ್ಣು ಮಾರಾಟವಾಗುತ್ತಿದೆ.
ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಶರೀರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ನೇರಳೆ ಹಣ್ಣಿನ ಸೇವನೆ ಉಪಯುಕ್ತ. ರಕ್ತದ ಶುದ್ಧೀಕರಣಕ್ಕೂ ಇದು ಸಹಕಾರಿ. ಔಷಧ ಗುಣ ಎಂದ ಮಾತ್ರಕ್ಕೆ ಒಮ್ಮೆಲೇ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು.
ಫ್ರಿಡ್ಜ್ ನಲ್ಲಿಟ್ಟು ತಿನ್ನಬೇಡಿ
ನೇರಳೆ ಬಹು ಔಷಧ ಗುಣವನ್ನು ಹೊಂದಿದೆ. ದೇಹದ ಉಷ್ಣತೆ ಕಡಿಮೆ ಮಾಡುವುದು, ಜೀರ್ಣಶಕ್ತಿಗೆ, ಕರುಳಿನ ಹುಣ್ಣಿಗೆ (ಅಲ್ಸರ್) ಮತ್ತು ದೇಹದ ಪ್ರತಿರೋಧಕ ಶಕ್ತಿಗೆ ಒಳ್ಳೆಯದು. ದಿನಕ್ಕೆ 4-5 ಹಣ್ಣು ತಿನ್ನಬಹುದು. ಇದರಲ್ಲಿ ಕಷಾಯದ ಒಗರು ರಸ ಇರುತ್ತದೆ. ಮಧುಮೇಹಕ್ಕೆ ಒಳ್ಳೆಯದು ಎಂದು ಪ್ರಸಿದ್ದಿ ಪಡೆದಿದೆ. ಹಣ್ಣು ಅಥವಾ ಇದರ ಬೀಜವನ್ನು ಒಣಗಿಸಿ ಪುಡಿ ಮಾಡಿ ನೀರಿನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.ಯಾವುದೇ ಫಲವಾದರೂ ಮಿತ ಸೇವನೆಯಾಗಿರಬೇಕು. ನೇರಳೆ ಸಹಿತ ಯಾವುದೇ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ.
– ಡಾ| ಕೆ. ಜಯರಾಮ ಭಟ್,
ಆಯುರ್ವೇದ ವೈದ್ಯರು, ಉಡುಪಿ.