Advertisement

ನಗರದೆಲ್ಲೆಡೆ ಸಂವಿಧಾನ ಶಿಲ್ಪಿಯ ಸ್ಮರಣೆ

12:49 AM Apr 15, 2019 | Lakshmi GovindaRaju |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 128ನೇ ಜಯಂತಿಯನ್ನು ನಗರದೆಲ್ಲಡೆ ಭಾನುವಾರ ಆಚರಿಸಲಾಯಿತು. ಜತೆಗೆ ಅಂಬೇಡ್ಕರ್‌ ಅವರ ಭಾವ ಚಿತ್ರದ ಮೆರವಣಿಗೆ ಮತ್ತು ಕಾಲ್ನಡಿಗೆ ಜಾಥಾ ಗಮನ ಸೆಳೆದವು.

Advertisement

ದಲಿತ ಸಂಘಟನೆ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್‌ ಸೇನೆ ಮತ್ತು ಸ್ಫೂರ್ತಿಧಾಮ ಬಳಗ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸಂವಿಧಾನ ಶಿಲ್ಪಿಯ ಜನ್ಮದಿನಾಚರಣೆ ಸಂಭ್ರಮಿಸಿದವು. ಇದೇ ವೇಳೆ ಅಂಬೇಡ್ಕರ್‌ ಅವರ ಸಾಧನೆ ಸ್ಮರಿಸಲಾಯಿತು.

ಬೃಹತ್‌ ಕಾಲ್ನಡಿಗೆ ಜಾಥ: ದಲಿತ ಸಂಘರ್ಷ ಸಮಿತಿ (ಸಮತಾವಾದ) ಬೆಂಗಳೂರು ರಾಜ್ಯ ಸಮಿತಿ ವತಿಯಿಂದ ಅಂಬೇಡ್ಕರ್‌ ಜಯಂತಿ ಹಿನ್ನೆಲೆಯಲ್ಲಿ ಬೆಳ್ಳಿ -ರಥದೊಂದಿಗೆ ಬೃಹತ್‌ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಮೈಸೂರು ಬ್ಯಾಂಕ್‌ ವೃತ್ತದಿಂದ ವಿಧಾನಸೌಧವರೆಗೆ ಮೆರವಣಿಗೆ ಸಾಗಿ, ವಿಧಾನಸೌಧದ ಎದುರಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಜಾಥಾದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಮುನಿಯಪ್ಪ ಮಾತನಾಡಿ, ಬಿ.ಆರ್‌.ಅಂಬೇಡ್ಕರ್‌ ಅವರ ಕೊಡುಗೆಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕಾಗಿದೆ ಎಂದರು. ದಲಿತ ಮುಖಂಡರಾದ ಎಚ್‌.ಆರ್‌.ವಿಶ್ವನಾಥ್‌, ಬೇಗೂರು ಟಿ.ಚಂದ್ರಪ್ಪ, ಮುನಿರಾಜು ಹೊಂಗಸಂದ್ರ ಮತ್ತಿತರರು ಉಪಸ್ಥಿತರಿದ್ದರು.

ಸ್ಫೂರ್ತಿಧಾಮದಲ್ಲಿ ಅಂಬೇಡ್ಕರ್‌ ಹಬ್ಬ: ಮಾಗಡಿ ಮುಖ್ಯ ರಸ್ತೆಯ ಅಂಜನಾ ನಗರದಲ್ಲಿರುವ ಸ್ಫೂರ್ತಿಧಾಮದಲ್ಲಿ “ಅಂಬೇಡ್ಕರ್‌ ಹಬ್ಬ’ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ, ವೈಚಾರಿಕ ಹೋರಾಟಗಾರ ಪ್ರೊ.ನರೇಂದ್ರ ನಾಯಕ್‌, ಗಿರಿಜನರ ಹಾಡಿಯ ಅಭಿವೃದ್ಧಿಗಾಗಿ ದುಡಿಯುತ್ತಿರುವ ಜಾನಕಮ್ಮ, ಅನಾಥ ಶವಗಳನ್ನು ಸಂಸ್ಕಾರ ಮಾಡುತ್ತಿರುವ ತ್ರಿವಿಕ್ರಮ ಮಹಾದೇವ,

Advertisement

ಮಧ್ಯಪಾನ ವಿರುದ್ಧ ಸಮರ ಸಾರಿದ ಬೆಳಗಾವಿಯ ರುಕ್ಮಿಣಿ ಬಾಯಿ ರೋಹಿದಾಸ್‌ ಕಾಂಬಳೆ ಅವರಿಗೆ “ಬೋಧಿವರ್ಧನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋವಾದ ಐಐಎಂನ ಹಿರಿಯ ಪ್ರಾಧ್ಯಾಪಕ ಪ್ರೊ.ಆನಂದ್‌ ತೇಲ್ತುಂಬ್ಡೆ ಅವರಿಗೆ “ಬೋಧಿ ವೃಕ್ಷ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮತದಾರರ ಜಾಗೃತಿ ಸಮಾವೇಶ: ಅಂಬೇಡ್ಕರ್‌ ಜಯಂತಿ ಅಂಗವಾಗಿ ಅಂಬೇಡ್ಕರ್‌ ಜನ್ಮದಿನಾಚರಣೆ ಸಮಿತಿ ವತಿಯಿಂದ ಜಯನಗರದ ಅಶೋಕ ಪಿಲ್ಲರ್‌ ಮುಂಭಾಗ “ಮತದಾರರ ಜಾಗೃತಿ ಕಾರ್ಯಕ್ರಮ’ ಆಯೋಜಿಸಲಾಗಿತ್ತು. ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಸಾಹಿತಿ ಚಂದ್ರಶೇಖರ ಪಾಟೀಲ, ಸಮಾಜಿಕ ಹೋರಾಟಗಾರ ಶಲೀಲ್‌ ಶೆಟ್ಟಿ, ಡಾ.ಆರ್‌.ಮೋಹನ್‌ ರಾಜ್‌ ಮತ್ತಿತರರು ಭಾಗವಹಿಸಿದ್ದರು.

ಕಬ್ಬನ್‌ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ಪ್ರಜಾ ವಿಮೋಚನಾ ಚಳವಳಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಹಾಗೂ ಇತರರು ಪಾಲ್ಗೊಂಡಿದ್ದರು.

ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ವೇಣುಗೋಪಾಲ್‌ ಮತ್ತು ಕುಲಸಚಿವ ಪ್ರೊ.ಬಿ.ಕೆ.ರವಿ ಅವರು, ಬೆಂಗಳೂರು ವಿವಿ ಆಡಳಿತ ಕಚೇರಿಯ ಮುಂಭಾಗದಲ್ಲಿರುವ ಅಂಬೇಡ್ಕರ್‌ರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಅಂಬೇಡ್ಕರ್‌ ಯುವ ಸೇನೆ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌, ಮಾಜಿ ಶಾಸಕ ಪ್ರಿಯ ಕೃಷ್ಣ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಭಾಗವಹಿಸಿ ಅಂಬೇಡ್ಕರ್‌ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next