Advertisement
ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿಯಿರುವುದರಿಂದ ರಾಜ್ಯಾದ್ಯಂತ ಸರ್ಕಾರಿ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಇದು ಅಭಿವೃದ್ಧಿಪರ ರಾಜ್ಯವೊಂದರ ಲಕ್ಷಣವಲ್ಲ ಎಂದು ನಿವೃತ್ತ ಉನ್ನತ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಪ್ರತಿ ವರ್ಷ ನೇಮಕ ಪ್ರಕ್ರಿಯೆ, ಅಗತ್ಯವಿರುವ ಹುದ್ದೆಗಳನ್ನು ಗುರುತಿಸಲು ಸಮೀಕ್ಷೆ, ಇಲಾಖೆ ಹಂತದಲ್ಲೇ “ಸಿ’ ಮತ್ತು “ಡಿ’ ದರ್ಜೆ ಹುದ್ದೆ ನೇಮಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಸರ್ಕಾರಿ ಸೇವೆಯಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸಿದವರ ಅಭಿಪ್ರಾಯ, ಸಲಹೆಗಳ ಸಂಕ್ಷಿಪ್ತ ವಿವರ ಹೀಗಿದೆ.
ಖಾಲಿ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡಿಕೊಳ್ಳದಿದ್ದರೆ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಒಂದೆಡೆ ಇಲಾಖಾವಾರು ನಿಯಮಿತವಾಗಿ ನೇಮಕ ನಡೆಯುತ್ತಿಲ್ಲ. ಇನ್ನೊಂದೆಡೆ ಕರ್ನಾಟಕ ಲೋಕಸೇವಾ ಆಯೋಗದಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ನೇಮಕ ನಡೆಯದ ಕಾರಣ ಖಾಲಿ ಹುದ್ದೆ ಸಂಖ್ಯೆ ಹೆಚ್ಚಾಗುತ್ತಿರುವ ಸಾಧ್ಯತೆ ಇದೆ.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹಾಲಿ ನೌಕರ, ಸಿಬ್ಬಂದಿ ವಿವರ, ಖಾಲಿಯಿರುವ ಹುದ್ದೆ ಹಾಗೂ ಅಗತ್ಯವಿರುವ ಹುದ್ದೆಗಳನ್ನು ಪಟ್ಟಿ ಮಾಡಿಕೊಂಡು ಅದರಂತೆ ವೇಳಾಪಟ್ಟಿ ಸಿದ್ಧಪಡಿಸಿ ನೇಮಕ ಮಾಡಿಕೊಳ್ಳಬೇಕು. ಮುಂದಿನ ವರ್ಷ ನಿವೃತ್ತಿಯಾಗುವವರ ಸಂಖ್ಯೆ, ಹೊಸ ಉದ್ಯೋಗ ಸೃಷ್ಟಿಯನ್ನೂ ಗಮನದಲ್ಲಿಟ್ಟುಕೊಂಡು ಇಲಾಖಾವಾರು ನೇಮಕ ಮಾಡಿಕೊಳ್ಳಬೇಕು. ಪ್ರತಿ ಇಲಾಖೆಯಲ್ಲೂ ಇದೇ ವಿಧಾನ ಅನುಸರಿಸಬೇಕು. ಸಾಮಾನ್ಯವಾಗಿ ಗುಮಾಸ್ತ, ಗ್ರೂಪ್ “ಡಿ’ ನೌಕರರ ಹುದ್ದೆಗಳೇ ಹೆಚ್ಚಾಗಿ ಖಾಲಿ ಇರುತ್ತವೆ. ಅನಗತ್ಯ ಹುದ್ದೆಗಳನ್ನು ಆಗಾಗ್ಗೆ ರದ್ದುಪಡಿಸಬೇಕು. ಹೆಚ್ಚುವರಿ ಅಧಿಕಾರಿ, ನೌಕರ, ಸಿಬ್ಬಂದಿಯನ್ನು ಅಗತ್ಯವಿರುವ ಕಡೆಗೆ ನಿಯೋಜಿಸಬೇಕು. ಈ ರೀತಿಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಅಭಿವೃದ್ಧಿ ಕಾರ್ಯದ ಮೇಲೆ ಖಂಡಿತ ಪರಿಣಾಮ ಬೀರಲಿದೆ.
-ಡಾ.ಎ.ರವೀಂದ್ರ, ನಿವೃತ್ತ ಮುಖ್ಯ ಕಾರ್ಯದರ್ಶಿ
Related Articles
ಬದಲಾದ ಸಂದರ್ಭಕ್ಕೆ ತಕ್ಕಂತೆ ಅಗತ್ಯ ಹುದ್ದೆಗಳನ್ನು ಹೊಂದುವುದು ಬಹಳ ಮುಖ್ಯ. ಇಂದಿನ ಆಧುನಿಕ ಯುಗದಲ್ಲಿ ಚಾಲಕರು, “ಡಿ’ಗ್ರೂಪ್ ನೌಕರರ ಹುದ್ದೆ ಅಗತ್ಯವಿಲ್ಲವೆನಿಸುತ್ತದೆ. ಗುಮಾಸ್ತ ಹುದ್ದೆ ಬ್ರಿಟಿಷರ ಸೃಷ್ಟಿಯಾಗಿದ್ದು, ಬೇರೆಲ್ಲೂ ಈ ಹುದ್ದೆ ಇಲ್ಲ. ಚಾಲಕರ ಹುದ್ದೆಯನ್ನು ಹೊರಗುತ್ತಿಗೆ ನೀಡಬಹುದು. ಶೇ. 10ರಿಂದ ಶೇ.15ರಷ್ಟು ಹುದ್ದೆ ಖಾಲಿಯಿದ್ದರೆ ನಿಭಾಯಿಸಬಹುದು. ಅದಕ್ಕಿಂತಲೂ ಹೆಚ್ಚು ಹುದ್ದೆ ಖಾಲಿಯಿದ್ದರೆ ಸಮಸ್ಯೆ ತಲೆದೋರಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಶೇ.30ರಿಂದ ಶೇ.60ರಷ್ಟು ಹುದ್ದೆ ಖಾಲಿಯಿದ್ದು, ಪ್ರಗತಿಯನ್ನೇ ಕಾಣದಂತಾಗಿದೆ.
Advertisement
ಕೇಂದ್ರ ಸರ್ಕಾರದಲ್ಲಿ ಹಿಂದಿನ ಮೂರು ವರ್ಷಗಳಲ್ಲಿ ಯಾವ ಇಲಾಖೆಯಲ್ಲಿ ಎಷ್ಟು ಹೊಸ ಹುದ್ದೆ ಸೃಷ್ಟಿಯಾಗಿದೆ, ಮುಂದಿನ ಮೂರು ವರ್ಷಗಳಿಗೆ ಅಗತ್ಯ ಹುದ್ದೆ, ಖಾಲಿಯಾದ ಹುದ್ದೆಗಳನ್ನು ಗುರುತಿಸಿ ಅದೇ ವರ್ಷ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಹಾಗಾಗಿ ಕೇಂದ್ರ ಲೋಕಸೇವಾ ಆಯೋಗವು ಪ್ರತಿವರ್ಷ ನೇಮಕ ಪ್ರಕ್ರಿಯೆ ನಡೆಸುತ್ತದೆ. ಕೆಪಿಎಸ್‌ಸಿ ಕೂಡ ಇದೇ ರೀತಿಯಲ್ಲಿ ನೇಮಕ ಮಾಡಬೇಕು. ಆದರೆ ಕೆಪಿಎಸ್‌ಸಿಯಲ್ಲಿ ವಿವಾದಗಳಿಂದಲೇ ನೇಮಕಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿರುವುದು ದುರದೃಷ್ಟಕರ.
ಆಯ್ದ ತಾಂತ್ರಿಕ ಹಾಗೂ ಜವಾಬ್ದಾರಿ ಹುದ್ದೆಗೆ ನೇಮಕ ನಡೆದರೂ ತರಬೇತಿ ಪಡೆದು ಸೇವೆ ಆರಂಭಿಸಲು ಒಂದೆರಡು ವರ್ಷ ಬೇಕಾಗಲಿದೆ. ಹಾಗಾಗಿ ನೇಮಕಾತಿ ಮತ್ತು ತರಬೇತಿ ನಿರಂತರವಾಗಿ ನಡೆಯುತ್ತಿರಬೇಕು. ಮಾಹಿತಿ ತಂತ್ರಜ್ಞಾನ ಹಾಗೂ ಸುಧಾರಿತ ತಂತ್ರಜ್ಞಾನ ಬಳಕೆಯಿಂದ ಹುದ್ದೆಗಳ ಸಂಖ್ಯೆ ಕಡಿಮೆಯಾಗಬೇಕು. ಆದರೆ ಆ ರೀತಿ ಆಗುತ್ತಿಲ್ಲ. ಸರ್ಕಾರದ ಆಡಳಿತದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದೆಲ್ಲಾ ಆಡಳಿತದ ಮೇಲೆ ಪರಿಣಾಮ ಬೀರಲಿದೆ.-ಎಸ್.ಎಂ.ಜಾಮದಾರ್, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ವೈಜ್ಞಾನಿಕ ಸರ್ವೇ ನಡೆಸಬೇಕು
ಖಾಲಿ ಸರ್ಕಾರಿ ಹುದ್ದೆಗಳ ಸಂಖ್ಯೆ ಹೆಚ್ಚಾದಂತೆ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುವುದು ಸಹಜ. ಖಾಲಿಯಿರುವ ಹುದ್ದೆಗಳು ಯಾವ ಸ್ವರೂಪದ್ದು ಎಂಬುದು ಮುಖ್ಯ. ಜನರಿಗೆ ನೇರವಾಗಿ ಸೌಲಭ್ಯ ಕಲ್ಪಿಸುವ, ಜನರೊಂದಿಗೆ ನೇರವಾಗಿ ವ್ಯವಹರಿಸುವ ಹುದ್ದೆಗಳನ್ನು ಖಾಲಿ ಇಟ್ಟುಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಉನ್ನತ ಶ್ರೇಣಿಯ ಹುದ್ದೆಗಳು ಖಾಲಿಯಿದ್ದರೆ ಹೆಚ್ಚಿನ ಪರಿಣಾಮ ಬೀರದು. ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಅನೇಕ ಹುದ್ದೆಗಳು ಅನಗತ್ಯವೆನಿಸಿವೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದಕ್ಕೆ ಪೂರಕವಾಗಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಗುರುತಿಸಲು ವೈಜ್ಞಾನಿಕ ಸರ್ವೇ ನಡೆಸಬೇಕು. ಈವರೆಗೆ ಇಂತಹ ಪ್ರಯತ್ನ ನಡೆದಿಲ್ಲ. ತುರ್ತು ಸೇವೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಯಾವುದೇ ಕಾರಣಕ್ಕೂ ಖಾಲಿ ಬಿಡಬಾರದು. ಇತರೆ ಮಹತ್ವವಲ್ಲದ ಹುದ್ದೆಗಳನ್ನು ಖಾಲಿಯಿಟ್ಟುಕೊಳ್ಳುವುದರಿಂದ ಸರ್ಕಾರಕ್ಕೆ ಸಂಪನ್ಮೂಲ ಉಳಿತಾಯವಾಗಲಿದೆ ಎಂಬುದು ಕೂಡ ಸತ್ಯ.
-ಕೆ.ಜೈರಾಜ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆಯಂತಹ ಸೇವಾ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಾಗಿದ್ದರೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಾಗಾಗಿ ನೇಮಕಾತಿ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕು. ಪ್ರತಿ ವರ್ಷ ಖಾಲಿಯಾಗುವ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಇದನ್ನು ನಿರಂತರವಾಗಿ ನಡೆಸಿದರೆ ಖಾಲಿ ಹುದ್ದೆ ಸಮಸ್ಯೆ ಕಾಡದು.
-ಚಿರಂಜೀವಿ ಸಿಂಗ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪೊಲೀಸ್ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಇಟ್ಟುಕೊಳ್ಳುವಂತಿಲ್ಲ. ಅದರಲ್ಲೂ ಪೇದೆ ಹುದ್ದೆಗಳು ಖಾಲಿಯಿದ್ದರೆ ಹಾಲಿ ಪೇದೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ. ಮೂರ್‍ನಾಲ್ಕು ವರ್ಷಕ್ಕೊಮ್ಮೆ ನೇಮಕ ಮಾಡಿಕೊಂಡರೆ ಖಾಲಿ ಹುದ್ದೆ ಸಮಸ್ಯೆ ಕಾಡಲಿದೆ. ಬದಲಿಗೆ ಐದು ವರ್ಷಕ್ಕೆ ಅಗತ್ಯವಾದ ಹುದ್ದೆಗಳ ನೇಮಕಕ್ಕೆ ಒಂದೇ ಆದೇಶದಲ್ಲಿ ಮಂಜೂರಾತಿ ನೀಡಬೇಕು. ಅದರಂತೆ ಪ್ರತಿ ವರ್ಷ 4000- 5000 ಹುದ್ದೆ ನೇಮಕ ಮಾಡಿಕೊಳ್ಳಬೇಕು. ಮಂಜೂರಾದ ಹುದ್ದೆಗಳಾಗಿರುವುದರಿಂದ ಹಣಕಾಸು ಇಲಾಖೆಯಿಂದಲೂ ಹೆಚ್ಚಿನ ಅಡಚಣೆ ಉಂಟಾಗುವುದಿಲ್ಲ.
-ಡಾ.ಅಜಯ್‌ಕುಮಾರ್ ಸಿಂಹ, ನಿವೃತ್ತ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಸರ್ಕಾರದಲ್ಲಿ 7.97 ಲಕ್ಷ ಮಂಜೂರಾದ ಹುದ್ದೆಯಲ್ಲಿ 2.48 ಲಕ್ಷ ಹುದ್ದೆ ಖಾಲಿಯಿವೆ. ವರ್ಷಾಂತ್ಯದ ವೇಳೆಗೆ 13,800 ಹುದ್ದೆಗಳು ಖಾಲಿಯಾಗಲಿವೆ. ಇದರಿಂದ ಹಾಲಿ ನೌಕರ, ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ “ಸಿ’ ಮತ್ತು “ಡಿ’ ಶ್ರೇಣಿಯ ಖಾಲಿ ಹುದ್ದೆಗಳನ್ನು ಆಯಾ ಇಲಾಖೆಗಳಲ್ಲೇ ನೇಮಕಾತಿ ಸಮಿತಿ ರಚಿಸಿಕೊಂಡು ನೇಮಕಕ್ಕೆ ಅವಕಾಶ ನೀಡಬೇಕು. “ಎ’ ಮತ್ತು “ಬಿ’ ಶ್ರೇಣಿಯ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಬಹುದು. 2013ರಿಂದ ಈವರೆಗೆ 40,000ಕ್ಕೂ ಹೆಚ್ಚು ಖಾಲಿ ಹುದ್ದೆ ಭರ್ತಿಯಾಗಿದ್ದು, ಇನ್ನಷ್ಟು ತ್ವರಿತವಾಗಿ ನೇಮಕ ಪ್ರಕ್ರಿಯೆ ನಡೆಯಬೇಕು.
-ಬಿ.ಪಿ.ಮಂಜೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ