Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗಬೇಕಿದ್ದ ಬೆಳೆವಿಮೆ ಯೋಜನೆ ವಿಮಾ ಕಂಪನಿಗಳಿಗೆ ಲಾಭ ಆಗುತ್ತಿದೆ. ಕಳೆದ ವರ್ಷ ರಾಜ್ಯದಿಂದ ವಿಮಾ ಕಂಪನಿಗಳಿಗೆ ರೈತರ ವಂತಿಗೆ ಸೇರಿ ಕೇಂದ್ರ ರಾಜ್ಯ ಸರ್ಕಾರಗಳಿಂದ ಒಟ್ಟು 1,200 ಕೋಟಿ ಹಣ ಸಂದಾಯವಾಗಿದೆ. ಆದರೆ ಆ ಪೈಕಿ ರಾಜ್ಯದ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಕ್ಕಿದ್ದು ಮಾತ್ರ 550 ಕೋಟಿ. ಉಳಿದ 650 ಕೋಟಿ ವಿಮಾ ಕಂಪನಿಗಳಿಗೆ ಲಾಭ ಆಗಿದೆ ಎಂದರು. ರಾಜ್ಯ ಸರ್ಕಾರ ಎರಡು- ಮೂರು ವರ್ಷಗಳಿಂದ ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಆಗಿರುವ ಲಾಭದ ಬಗ್ಗೆ ಸಮಗ್ರ ತನಿಖೆ ಆದೇಶಿಸಲಾಗಿದೆ. ಜತೆಗೆ ತೆಲಂಗಾಣ ಮಾದರಿ ಬೆಳೆ ವಿಮೆ ನೀತಿ ರೂಪಿಸುವ ಸಂಬಂಧ ಗಂಭೀರ ಚಿಂತನೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಮಳೆ ಕ್ಷೀಣಿಸಿರುವುದರಿಂದ ಬಿತ್ತನೆ ಪ್ರಮಾಣ ಕೂಡ ಕಡಿಮೆಯಾಗಿದೆ. ಸದ್ಯ ಹವಾಮಾನ ಇಲಾಖೆ ಪ್ರಕಾರ ಇನ್ನೂ 15 ದಿನಗಳಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಮತ್ತೆ ಮಳೆ ಕ್ಷೀಣಿಸಿದರೆ ಬರದ ಜಿಲ್ಲೆಗಳ ಘೋಷಣೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಇತ್ತೀಚೆಗೆ ರಾಗಿ, ಭತ್ತ ಮತ್ತಿತರ ರೈತರ ಉತ್ಪನ್ನಗಳಿಗೆ ಘೋಷಿಸಿರುವ ಬೆಂಬಲ ಬೆಲೆ ಕೂಡ ಅವೈಜ್ಞಾನಿಕವಾಗಿದೆ ಎಂದು ಕೃಷಿ ಸಚಿವರು ಟೀಕಿಸಿದರು.