Advertisement

ಹದಗೆಟ್ಟ ಜೋಳಶೆಟ್ಟಿಹಳ್ಳಿಗೆ ಸಂಪರ್ಕ ರಸ್ತೆ: ಸವಾರರು ಪರದಾಟ

09:20 PM Apr 30, 2019 | Team Udayavani |

ಗುಡಿಬಂಡೆ: ಪ್ರಯಾಣಿಕರಿಗೆ ಪ್ರತಿ ನಿತ್ಯದ ಗೋಳು, ಆಸ್ಪತ್ರೆಗೆ ತೆರಳುವ ರೋಗಿಗಳ ಬಾಧೆ, ಶಾಲಾ ಮಕ್ಕಳಿಗೆ ಕೆಸರಾಟ, ದುಪ್ಪಟ್ಟು ಹಣ ನೀಡಿದರೂ ಬಾರದ ಆಟೋಗಳು, ಮಳೆ ಬಂದರೆ ಉಳುಮೆ ಮಾಡದೇ ಇಲ್ಲಿ ಪೈರು ನಾಟಿ ಮಾಡಬಹುದು.

Advertisement

ಈ ಎಲ್ಲಾ ಪರಿಸ್ಥಿತಿ ಗುಡಿಬಂಡೆಯಿಂದ ಚೋಳಶೆಟ್ಟಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ. ಗುಡಿಬಂಡೆಯಿಂದ ಚೋಳಶೆಟ್ಟಿಹಳ್ಳಿ ಮೂಲಕ ಎಲ್ಲೋಡಿಗೆ ಕಲ್ಪಿಸುವ ಈ ರಸ್ತೆಗೆ ಡಾಂಬರೀಕರಣ ಮಾಡಿ ದಶಕಗಳು ಕಳೆದಿದೆ. ರಸ್ತೆ ಗುಂಡಿಗಳು, ಕಲ್ಲುಗಳಿಂದ ಕೂಡಿದ್ದು, ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುತ್ತದೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅನೇಕ ವರ್ಷಗಳಿಂದ ಈ ಭಾಗದವರಿಗೆ ಹದಗೆಟ್ಟ ರಸ್ತೆಯಲ್ಲೇ ನಿತ್ಯ ಸಂಚರಿಸುವ ದುಸ್ಥಿತಿ ಭಾಗ್ಯ ಕಲ್ಪಿಸಲಾಗಿದೆ. ಕೇವಲ ಚುನಾವಣೆ ಸಮಯಗಳಲ್ಲಿ ಇಲ್ಲಿಗೆ ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯಲ್ಲ.

ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಜನಪ್ರತಿನಿಧಿಗಳಿಗೆ ನಮ್ಮ ಗೋಳು ಹೇಗೆ ತಿಳಿಯುತ್ತದೆ ಎಂದು ಈ ಬಾಗದ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುವ ವೆಂಕಟೇಶಪ್ಪ, ಅಶೋಕ್‌, ಕುಮಾರ್‌, ಸುದರ್ಶನ್‌ ಮಧು, ವೆಂಕಟೇಶಪ್ಪ, ಪ್ರಸಾದ್‌, ರವಿ, ಬಾಲಪ್ಪ ಪ್ರಶ್ನಿಸಿದ್ದಾರೆ.

ನಿತ್ಯ ನೂರಾರು ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಶಾಲೆಗೆ ಬಸ್‌, ಸೈಕಲ್‌ಗ‌ಳಲ್ಲಿ ಪ್ರಯಾಣಿಸುತ್ತಿದ್ದು, ಅನೇಕ ಬಾರಿ ಮಾರ್ಗ ಮಧ್ಯದಲ್ಲಿ ಬಿದ್ದು ಗಾಯಗೊಂಡಿರುವ ಅನೇಕ ಉದಾಹರಣೆಗಳಿವೆ. ಮಳೆಗಾಲದಲ್ಲಂತೂ ಮಕ್ಕಳನ್ನು ಆತಂಕದಲ್ಲೇ ಶಾಲೆಗೆ ಕಳುಹಿಸುವ ಸ್ಥಿತಿ ಇಲ್ಲಿನ ಪೋಷಕರದ್ದು.

Advertisement

ಬಹುತೇಕ ಮಂದಿ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಗ್ರಾಮಸ್ಥರು ಶಾಲಾ ಬಸ್‌ ಗೆ ಹಣ ನೀಡಲಾಗದೆ ಹಾಗೂ ಆತಂಕಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸದೇ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.

ಗುಡಿಬಂಡೆಯಿಂದ ವಾಪಸಂದ್ರ ಮಾರ್ಗವಾಗಿ ಚೋಳಶೆಟ್ಟಿಹಳ್ಳಿ ಹಾಗೂ ಎಲ್ಲೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ರಸ್ತೆಯ ದುರಸ್ತಿಗಾಗಿ ಈಗಾಗಲೇ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಶೀಘ್ರವೇ ಡಾಂಬರೀಕರಣ ಮಾಡಲಾಗುವುದು ಎಂದು ಹೇಳಿದ್ದಾರೆ.
-ಎಸ್‌.ಎನ್‌.ಸುಬ್ಟಾರೆಡ್ಡಿ, ಶಾಸಕ

ಗುಡಿಬಂಡೆಯಿಂದ ಚೋಳಶೆಟ್ಟಿಹಳ್ಳಿಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಅನೇಕ ವರ್ಷಗಳಿಂದ ದುರಸ್ತಿ ಆಗಿಲ್ಲ. ಇದೇ ಮಾರ್ಗದಲ್ಲಿ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ಈ ರಸ್ತೆಯ ಮೂಲಕ ಭಕ್ತರು ಸಂಚರಿಸಲು ಹರಸಾಹಸಪಡುವಂತಾಗಿದೆ.
-ಶ್ರೀನಿವಾಸ್‌, ಗ್ರಾಪಂ ಸದಸ್ಯ ವಾಪಸಂದ್ರ ಉಪ್ಪಾರಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next