Advertisement

ಕಾಂಗ್ರೆಸ್ ಸೇವಾದಳ ರಾಜ್ಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

01:22 PM Dec 23, 2021 | Team Udayavani |

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಮುಖ್ಯಸಂಘಟಕರಾದ ಎಂ.ರಾಮಚಂದ್ರ ಅವರು ಗುರುವಾರ ಬಿಡುಗಡೆ ಮಾಡಿದರು.

Advertisement

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಸಮಿತಿ ಹಾಗೂ ಕರ್ನಾಟಕ ಸೇವಾದಳ ಉಸ್ತುವಾರಿ ಹೊತ್ತಿರುವ ಬಲರಾಂ ಬಂಡೋರಿ ಅವರ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಯಿತು.

ರಾಜ್ಯ ಸೇವಾದಳದ ಕಾರ್ಯ ಮುಖ್ಯ ಸಂಘಟಕರಾಗಿ ವಿ.ವಿ. ತುಳಸಿಗಿರಿ, ಕಾರ್ಯ ಮಹಿಳಾ ಮುಖ್ಯ ಸಂಘಟಕರಾಗಿ ಸುಜಾತ ಎಸ್. ಉಳ್ಳಾಲ್, ಯುವ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಜುನೈದ್ ಪಿ.ಕೆ, ಖಜಾಂಚಿಯಾಗಿ ಟಿ.ಆರ್.ಶಿವಕುಮಾರ್, ರಾಜ್ಯ ಉಪಾಧ್ಯಕ್ಷರುಗಳಾಗಿ ವಿನಾಯಕ ಮೂರ್ತಿ, ಹನುಮಂತರಾವ್ ಜವಳಿ, ಗೋಪಾಲ ಗೌಡ, ಗಿರಿಜ ಹುಗಾರ್, ಬಿ.ಎನ್. ಸಿಂಧೆ ಅವರನ್ನು ನೇಮಿಸಲಾಗಿದೆ.

ಬಲರಾಂ ಬಂಡೋರಿ ಅವರು ಮಾತನಾಡಿ, ‘ಸೇವಾದಳ ದೇಶದ ಮೊದಲ ಯುವ ಸಂಘಟನೆಯಾಗಿದ್ದು, ಇದನ್ನು 1923ರಲ್ಲಿ ನಾಗ್ಪುರ ಧ್ವಜ ಸತ್ಯಾಗ್ರಹದ ಸಮಯದಲ್ಲಿ ಸ್ಥಾಪಿಸಲಾಯಿತು. ಎನ್.ಎಸ್ ಹರ್ಡಿಕರ್ ಅವರು ಇದರ ಸಂಸ್ಥಾಪಕರಾಗಿದ್ದು, ಇದರ ಮೊದಲ ಅಧ್ಯಕ್ಷರು ಪಂಡಿತ್ ಜವಹರ್ ಲಾಲ್ ನೆಹರೂ ಅವರಾಗಿದ್ದರು. ಇದೇ ಡಿ.31ರಂದು ಈ ಸಂಘಟನೆ 99ನೇ ವರ್ಷಕ್ಕೆ ಕಾಲಿಡಲಿದೆ. ದೇಶದಸ್ವಾತಂತ್ರ್ಯ ಚಳುವಳಿಯಿಂದ ಹಿಡಿದು ನವ ಭಾರತ ನಿರ್ಮಾಣದಲ್ಲಿ ಸೇವಾದಳ ತನ್ನ ಸೇವೆ ಮಾಡಿದೆ. ಸೇವಾದಳ ಕಾಂಗ್ರೆಸ್ ನ ಸಂಘಟನೆಯಾಗಿದ್ದು, ಪಕ್ಷ ಯಾವ ಕೆಲಸ ಹೇಳುತ್ತದೆಯೋ ಅದನ್ನು ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ಜತೆಗೂಡಿ ಸೇವಾದಳ ಹೆಗಲಿಗೆಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಹಳ್ಳಿಗಳಿಗೆ ಮುಟ್ಟಿಸುವ ಕೆಲಸ ಮಾಡಲಿದೆ’ ಎಂದರು.

ರಾಮಚಂದ್ರ ಅವರು ಮಾತನಾಡಿ, ‘ಸೇವಾದಳ ಕಾಂಗ್ರೆಸ್ ಪಕ್ಷದ ಮುಖ್ಯ ಸಂಘಟನೆಯಾಗಿದೆ. ನಾವು ಕಾಂಗ್ರೆಸ್ ತತ್ವವನ್ನು ಹಳ್ಳಿ ಹಳ್ಳಿಗೆ ಹಾಗೂ ಬೂತ್ ಮಟ್ಟಕ್ಕೆ ತಲುಪಿಸುವಂತೆ ಸೋನಿಯಾ ಗಾಂಧಿ ಅವರು ನಮಗೆ ಆದೇಶ ನೀಡಿದ್ದಾರೆ. ನನಗೆ ಈಗ ರಾಜ್ಯ ಮುಖ್ಯ ಸಂಘಟಕ ಜವಾಬ್ದಾರಿ ನೀಡಿದ್ದು, ನನ್ನ ಜತೆ ನೂತನ ಪದಾಧಿಕಾರಿಗಳ ನೇಮಕ ಮಾಡಿದೆ. ಪ್ರತಿ ಜಿಲ್ಲೆ, ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಸೇವಾದಳದ ಸಂಘಟನೆ ಮಾಡಿ ಕಾಂಗ್ರೆಸ್ ಸಿದ್ಧಾಂತ ಹರಡಲು, ಮಹಾತ್ಮಾ ಗಾಂಧಿ ಅವರ ಸೇವೆ ಸಂದೇಶ ಸಾರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಮಗೆ ಸೂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ಈಗಾಗಲೇ ವಿಭಾಗ ಮಟ್ಟದ ಸಭೆ ನಡೆಸಿದ್ದು, ಮುಂದಿನದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ, ಸರ್ಕಾರಿ ಯೋಜನೆಗಳು ಜನರಿಗೆ ಸಿಗುವಂತೆ ಮಾಡುವ ವಿಚಾರವಾಗಿ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ​ಡಿ.26ರಂದು ಸೇವಾದಳ ದಿನವಾಗಿದ್ದು, 28ರಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡೂ ಕಾರ್ಯಕ್ರಮವನ್ನು ಒಟ್ಟಿಗೆ ನಡೆಸೋಣ ಎಂಬ ಕೆಪಿಸಿಸಿ ಅಧ್ಯಕ್ಷರ ಸಲಹೆ ಮೇರೆಗೆ ನಮ್ಮ ಕಾರ್ಯಕ್ರಮವನ್ನು 28ಕ್ಕೆ ಮುಂದೂಡಲಾಗಿದೆ. ಸೇವಾದಳ ಚುನಾವಣೆ ಸಮಯದಲ್ಲಿ ಮಾತ್ರವಲ್ಲ, ಎಲ್ಲ ಕಾಲದಲ್ಲೂ ಜನರ ಸೇವೆ ಮಾಡಿಕೊಂಡು ಬಂದಿದ್ದು, ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯದ ಕಾರಣ ನಮ್ಮ ಕಾರ್ಯಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲವಾಗಿದೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next