Advertisement
ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ದೇಶಾದ್ಯಂತ ಆತಂಕ ಪರ್ವ, ಬೆಳಗಾದರೆ ಬಿಜೆಪಿಗೆ ಹೋಗೋರು ಯಾರೋ ಎಂದು ನೋಡುವ ಸ್ಥಿತಿ. ಒಂದು ರೀತಿಯಲ್ಲಿ 2015ರಲ್ಲೇ ಇದು ಆರಂಭಗೊಂಡಿತಾದರೂ ಇತ್ತೀಚೆಗೆ ಈ ಮೇನಿಯಾ ಹೆಚ್ಚಾಗಿದೆ. ನಜ್ಮಾ ಹೆಫ್ತುಲ್ಲಾ, ಜಗದಂಬಿಕಾ ಪಾಲ್, ರೀತಾ ಬಹುಗುಣ ಜೋಷಿ, ದಗ್ಗುಬಾಟಿ ಪುರಂದೇಶ್ವರಿ ಹೀಗೆ ಸಾಲು ಸಾಲು ನಾಯಕರು ಕಮಲದತ್ತ ಚಿತ್ತ ಹರಿಸಿದರು. ರಾಜ್ಯದ ಮಟ್ಟಿಗೆ ಹೇಳುವುದಾದರೆ ಎಸ್.ಎಂ.ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷ ಮನೆ ಅಳಿಯನಂತೆ ನೋಡಿಕೊಂಡಿತ್ತು. ಜೀವನದ ಕೊನೇ ಘಟ್ಟದಲ್ಲಿ ಅವರೂ ಕಮಲದ ತೆಕ್ಕೆಗೆ ಬಂದಿದ್ದಾರೆ. ಅಧಿಕಾರದ “ವ್ಯಾಮೋಹ’ದ ಮುಂದೆ ಸಿದ್ಧಾಂತ, ಮೌಲ್ಯ, ಬದ್ಧತೆ, ವ್ಯಕ್ತಿತ್ವ ಎಂಬುದು ಗೌಣ ಅಥವಾ ಸವಕಲು.
Related Articles
Advertisement
ಈ ಮೂಲಕ, ಎಲ್ಲ ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ, ಮುಂದೆ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದಾ ಎಂಬ “ಹುಯಿಲೆಬ್ಬಿಸುವುದು’ ಇದರ ಮೂಲ ಉದ್ದೇಶ. ಈ ಬಾರಿ ಬಿಜೆಪಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಅಮಿತ್ ಶಾ ತಂಡ ಜೂನ್ ವೇಳೆಗೆ ರಾಜ್ಯದಲ್ಲಿ ಠಿಕಾಣಿ ಹೂಡುವುದು ನಿಶ್ಚಿತ. ಪ್ರಧಾನಿ ಮೋದಿ ತೆರೆಯ ಹಿಂದಿದ್ದೇ ತಮ್ಮ ದಾಳ ಉರುಳಿಸುವುದು ಖಚಿತ.
ಕರ್ನಾಟಕ ಹಾಗೂ ಉ.ಪ್ರದೇಶ ರಾಜಕಾರಣಕ್ಕೆ ವ್ಯತ್ಯಾಸ ಇರಬಹುದು. ಆದರೆ, ಅಲೆ ತಾತ್ಕಾಲಿಕ ಎಂಬುದು ನಿಜವಾದರೂ ಅದರ ಪ್ರಭಾವ ಜೋರಾಗಿಯೇ ಇರುತ್ತದೆ. ಮೇಲ್ನೋಟಕ್ಕೆ ಉತ್ತರಪ್ರದೇಶದ ಫಲಿತಾಂಶ ರಾಜ್ಯದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳುತ್ತಾರಾದರೂ ಎರಡೂ ಪಕ್ಷಗಳು “ಶೇಕ್’ ಆಗಿರುವುದಂತೂ ನಿಜ. ಹೀಗಾಗಿ, ಬಿಜೆಪಿಯ ವೇಗಕ್ಕೆ ಬ್ರೇಕ್ ಹಾಕುವುದು ಈ ಪಕ್ಷಗಳಿಗೆ ಅನಿವಾರ್ಯವಾಗಿದೆ. ಉ. ಪ್ರದೇಶ ಚುನಾವಣೆ ಫಲಿತಾಂಶಕ್ಕೆ ಮುನ್ನ ಅಲ್ಲಿನ ಮಾದರಿಯಲ್ಲಿ ರಾಜ್ಯದಲ್ಲೂ ಮಹಾಮೈತ್ರಿ ಮಾಡಿಕೊಂಡರೆ ಹೇಗೆ ಎಂಬ ಚಿಂತನೆ ಇತ್ತು. ಒಂದೊಮ್ಮೆ ಅದಕ್ಕೆ ಪೂರಕವಾಗಿ ಅಲ್ಲಿ ಕಾಂಗ್ರೆಸ್-ಸಮಾಜವಾದಿ ಪಕ್ಷ ಮೈತ್ರಿಗೆ ಬೆಂಬಲ ದೊರೆತಿದ್ದರೆ ಇಲ್ಲೂ ರಾಜಕೀಯ ಚಿತ್ರಣ ಬದಲಾಗುತ್ತಿತ್ತು. ಆದರೆ, ಅಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಕೊಚ್ಚಿ ಹೋಗಿದ್ದರಿಂದ ಜೆಡಿಎಸ್ ಸದ್ಯಕ್ಕೆ ಅಂತಹ ಸಾಹಸ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ. ಆದರೂ ಬಿಜೆಪಿಯನ್ನು ಕಟ್ಟಿಹಾಕುವ ವಿಚಾರದಲ್ಲಿ ದೇವೇಗೌಡರು ತೀರಾ ತಲೆಕೆಡಿಸಿಕೊಂಡರೆ ಚುನಾವಣೆ ಪೂರ್ವ ಮೈತ್ರಿಯಲ್ಲದಿದ್ದರೂ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಜತೆ “ಹೊಂದಾಣಿಕೆ’ಗೆ ಸೀಮಿತವಾಗಬಹುದಷ್ಟೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ ಆ ಸಾಧ್ಯತೆಯೂ ಅನುಮಾನ.
ರಾಜ್ಯದಲ್ಲಿ ಪ್ರಸ್ತುತ ರಾಜಕಾರಣದ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ಅತಿಯಾದ ಆತ್ಮವಿಶ್ವಾಸ, ಜೆಡಿಎಸ್‌ಗೆ ವಿಶ್ವಾಸ, ಕಾಂಗ್ರೆಸ್‌ನಲ್ಲಿ ನಿರುತ್ಸಾಹ ಎಂಬ ಸ್ಥಿತಿಯಿದೆ. ಬಿಜೆಪಿಯು ಲಿಂಗಾಯಿತ ಮತ್ತು ಎಲ್ಲ ಜಾತಿಯ ಯುವ ಸಮೂಹವನ್ನು ಸೆಳೆಯುತ್ತಿದೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಸಂಪೂರ್ಣ ಮತಬುಟ್ಟಿಗೆ ಕೈ ಹಾಕುವುದರ ಜತೆಗೆ ಅಹಿಂದದತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಕಾಂಗ್ರೆಸ್ ತಮ್ಮ ಪಾರಂಪರಿಕ ಅಹಿಂದ ಮತಗಳತ್ತಲೇ ಹೆಚ್ಚು ಗಮನ ನೀಡಿದ್ದು ಜತೆಗೆ ಆಯಾ ಭಾಗಗಳಲ್ಲಿ ಪ್ರಭಾವ ಹೊಂದಿರುವ ಹಾಗೂ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳುವ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಸಮುದಾಯದ ನಾಯಕರು ಸಹಜವಾಗಿ ಪಕ್ಷದ ಓಟ್‌ಬ್ಯಾಂಕ್ ಜತೆಗೆ ಸ್ವ ಸಾಮರ್ಥ್ಯದಿಂದ ಗೆದ್ದು ಬರಲಿದ್ದಾರೆ ಎಂಬ ಲೆಕ್ಕಾಚಾರದಲ್ಲೇ ಇದೆ. ಕಾಂಗ್ರೆಸ್ ಪಕ್ಷ ಸಹ ಉತ್ತರಪ್ರದೇಶ ಚುನಾವಣೆ ಫಲಿತಾಂಶ ನಂತರ ಭಯಗೊಂಡಿದೆಯಾದರೂ ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬ ಪೂರ್ವತಯಾರಿಯೂ ನಡೆದಿಲ್ಲ. ಕಾಂಗ್ರೆಸ್ಸಿಗರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅಳುಕು ಶುರುವಾದಂತಿದೆ. ಬಿಜೆಪಿಯ ಅಲೆಯ ನಡುವೆಯೂ ಅಹಿಂದ ವರ್ಗ ತಮ್ಮ ಜತೆ ನಿಂತೇ ನಿಲ್ಲುತ್ತದೆ. ಐದು ವರ್ಷಗಳ ಸರ್ಕಾರದ ಸಾಧನೆಯ ಅಭಿವೃದ್ಧಿ “ಅಂಡರ್‌ಕರೆಂಟ್’ ರೀತಿಯಲ್ಲಿ ಕೈ ಹಿಡಿದೇ ತೀರುತ್ತದೆ ಎಂಬ ವಿಶ್ವಾಸ ಇರುವುದು ಸಿದ್ದರಾಮಯ್ಯ ಅವರಿಗೊಬ್ಬರಿಗೆ ಮಾತ್ರ. ಆದರೆ, ಜನಸಾಮಾನ್ಯರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಆಡಳಿತದ ಬಗ್ಗೆ ಯಾವ ಅಭಿಪ್ರಾಯವಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಆಗಿಲ್ಲ.
ಒಂದು ವರ್ಷ ಚುನಾವಣೆ ಇರುವಾಗಲೂ ಮತದಾರರ ಪಲ್ಸ್ ಅರಿತು ಆ ನಿಟ್ಟಿನಲ್ಲಿ ರಣತಂತ್ರ ರೂಪಿಸುವ ಕೆಲಸವೂ ಆಗಿಲ್ಲ. ಕಾಂಗ್ರೆಸ್ ಐದು ವರ್ಷ ಅಧಿಕಾರ ನಡೆಸುವ ಅವಕಾಶ ಸಿಕ್ಕಾಗಲೂ ದಲಿತರೊಬ್ಬರಿಗೆ ಸಿಎಂ ಪಟ್ಟ ಕೊಡುವ ಸಾಧ್ಯತೆ ಇದ್ದರೂ ಕೊಡಲಿಲ್ಲ ಎಂಬ ಕೋಪ ಆ ಸಮುದಾಯಕ್ಕೆ ಇದ್ದೇ ಇದೆ. ಆ ಕೋಪ ತಣಿಸುವುದು ಇಲ್ಲಿ ಅತ್ಯಗತ್ಯ.
ರಾಜ್ಯದ ಮಟ್ಟಿಗೆ ಸೋನಿಯಾ, ರಾಹುಲ್, ಪ್ರಿಯಾಂಕಾಗಿಂತ “ಕಾಂಗ್ರೆಸ್’ ಹೆಸರು ಮತ್ತು ರಾಜ್ಯ ನಾಯಕರ ಸ್ವಸಾಮರ್ಥ್ಯ ಸಾಕು. ಪಕ್ಷಾಂತರದ ಹೊರತಾಗಿಯೂ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರ ಕೊರತೆಯಿಲ್ಲ. ಇವರೆಲ್ಲ ಒಗ್ಗಟ್ಟಾದರೆ ಕಾರ್ಯಕರ್ತರು, ಮುಖಂಡರ ದಂಡು ಎದ್ದು ನಿಲ್ಲುತ್ತದೆ. ಮಲಗಿರುವವರು ಎದ್ದು ನಡೆಯುವ ಅಥವಾ ಬಿರುಸಾಗಿ ಹೆಜ್ಜೆ ಹಾಕುವ ಹಂತಕ್ಕಾದರೂ ಬರಬಹುದು. ಏಕೆಂದರೆ ರಾಜ್ಯದಲ್ಲಿ ಇನ್ನೂ ಕಾಂಗ್ರೆಸ್ “ಬೇಸ್’ ಪೂರ್ಣವಾಗಿ ನೆಲಕಚ್ಚಿಲ್ಲ. ಸರ್ಕಾರದ ಸಾಧನೆ ಆಧಾರದ ಮೇಲೆ ಜನರ ಮನಸ್ಸು ಗೆಲ್ಲುವ, ತಮ್ಮ ಶಕ್ತಿಯನ್ನು ಪಕ್ಷಕ್ಕೆ ಧಾರೆ ಎರೆದರೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬಹುದು. ಆದರೆ, ಅಂತಹ ಲಕ್ಷಣಗಳೇ ಕಂಡುಬರುತ್ತಿಲ್ಲ.
ಇನ್ನು, ಜೆಡಿಎಸ್ ವಿಚಾರದಲ್ಲಿ ಹೇಳಬಹುದಾದರೆ ಆ ಪಕ್ಷಕ್ಕೆ ಕಾಂಗ್ರೆಸ್‌ಗಿಂತ ಬಿಜೆಪಿ ಬಗ್ಗೆಯೇ ಹೆಚ್ಚು ಭಯ. ಯಾಕೆಂದರೆ ಸದ್ಯಕ್ಕೆ ಯಾರು ಏನೇ ಹೇಳಿದರೂ ಲಿಂಗಾಯಿತ ಸಮುದಾಯದ ಏಕಮೇವ ನಾಯಕ ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿರುವುದರಿಂದ ಅವರೇ ಮುಂದಿನ ಸಿಎಂ ಎಂದು ಘೋಷಣೆಯಾಗಿರುವುದರಿಂದ ಸಹಜವಾಗಿ ಆ ಸಮುದಾಯದ ಸಂಪೂರ್ಣ ಬೆಂಬಲ ದೊರೆಯಬಹುದು. ಜತೆಗೆ ಯುವ ಸಮೂಹವನ್ನು ಹಿಂದುತ್ವ ಅಜೆಂಡಾದಡಿ ಸೆಳೆದು, ಪ್ರಜ್ಞಾವಂತ ಮತದಾರರರನ್ನು ಮೋದಿ ತಮ್ಮ ಮಾತಿನಿಂದ ಮೋಡಿ ಮಾಡಿದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಸಂಪನ್ಮೂಲವೂ ಹರಿದು ಬಂದರೆ ಬಿಜೆಪಿಗೆ ಅನುಕೂಲವಾಗಬಹುದು ಎಂಬ ಆತಂಕ. ಬಿಜೆಪಿ ಸಂಖ್ಯೆ 100 ದಾಟಿದರೆ ಮತ್ತೈದು ವರ್ಷ ವನವಾಸದ ಚಿಂತೆ. ಪಕ್ಷ ಅಧಿಕಾರ ಕಂಡು ಈಗಾಗಲೇ ಹತ್ತು ವರ್ಷ ಆಗಿದೆ. ಮುಂದಿನ ಬಾರಿಯೂ ಅಧಿಕಾರ ಇಲ್ಲದಿದ್ದರೆ ಪಕ್ಷದ ಭವಿಷ್ಯ ಮಸುಕಾಗಬಹುದು. ಹೀಗಾಗಿ, ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವುದು ಜೆಡಿಎಸ್‌ನ ಸದ್ಯದ ಅನಿವಾರ್ಯತೆ. ಜೆಡಿಎಸ್ ಇದೀಗ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಬಿಜೆಪಿ ವೇಗ ನಿಯಂತ್ರಿಸುವ ಕೆಲಸ ಮಾಡುವತ್ತ ಚಿತ್ತ ಹರಿಸಿದೆ. ಕಾಂಗ್ರೆಸ್ ಬಗ್ಗೆ ಜೆಡಿಎಸ್ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದಲ್ಲ. ಕಾಂಗ್ರೆಸ್ ಐದು ವರ್ಷ ಅಧಿಕಾರ ನಡೆಸಿರುವುದರಿಂದ ಸಹಜವಾಗಿ ಆಡಳಿತ ವಿರೋಧಿ ಅಲೆ ಇರಲಿದೆ. ಆ ಪಕ್ಷದಲ್ಲಿನ ಹಿರಿಯ ನಾಯಕರೇ ಬಹಿರಂಗವಾಗಿ ಪಕ್ಷ ಮತ್ತು ನಾಯಕತ್ವ ವಿರುದ್ಧ ಮಾತನಾಡುತ್ತಿರುವುದರಿಂದ ಸಹಜವಾಗಿ ಆ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ತಮಗೆ ಹೆಚ್ಚು ಹೊಡೆತ ಬೀಳುವುದು ಬಿಜೆಪಿಯಿಂದ, ಅದರ ವಿರುದ್ಧ ನಮ್ಮ ಮುಖ್ಯ ಹೋರಾಟ ಮಾಡೋಣ ಎಂಬ ತೀರ್ಮಾನಕ್ಕೆ ಬಂದಂತಿದೆ.
ಆದರೆ, ಜೆಡಿಎಸ್‌ಗೆ ಮೂಲ ಕೊರತೆ ಪ್ರಭಾವಿ ನಾಯಕರದ್ದು ಮತ್ತು ಸಂಪನ್ಮೂಲದ್ದು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಶಕ್ತಿಶಾಲಿ ನಾಯಕರೆಲ್ಲರೂ ಒಂದು ಕಾಲದಲ್ಲಿ ಜನತಾ ಪರಿವಾರದವರೇ. ಆದರೆ, ಈಗ ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿರುವಷ್ಟು ಪ್ರಭಾವಿ ನಾಯಕರ ದಂಡು ಜೆಡಿಎಸ್‌ನಲ್ಲಿಲ್ಲ. ಆರ್ಥಿಕವಾಗಿ ನೆರವು ಕೊಡುವವರಲ್ಲೂ ಇಲ್ಲ. ಜತೆಗೆ ಎಷ್ಟೇ ಹೆಣಗಾಡಿದರೂ ಜೆಡಿಎಸ್ ಹಳೇ ಮೈಸೂರಿಗೆ ಸೀಮಿತ, ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳಲಾಗುತ್ತಿಲ್ಲ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಸ್ಥಳೀಯ ಮಟ್ಟದ ನಾಯಕರ ವರ್ಚಸ್ಸೇ ಶ್ರೀರಕ್ಷೆಯಾಗಬೇಕು. ಜೆಡಿಎಸ್‌ನದು ಏಕಾಂಗಿ ಹೋರಾಟ ಸ್ಥಿತಿ. ಒಟ್ಟಾರೆ ರಾಜ್ಯದ ರಾಜಕಾರಣ ಅವಲೋಕಿಸುವುದಾದರೆ ಇವತ್ತಿನ ಸಂದರ್ಭದಲ್ಲಿ ಕಷ್ಟದ ಸ್ಥಿತಿಯಲ್ಲಿರುವುದು ಕಾಂಗ್ರೆಸ್. ಈ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಸಾಧನೆ “ಶೋಕೇಸಿಂಗ್’ ಮಾಡಿಕೊಳ್ಳಲೇ ಇಲ್ಲ. ಸರ್ಕಾರಕ್ಕೂ ಕೆಪಿಸಿಸಿಗೂ ಸಮನ್ವಯತೇ ಇರಲಿಲ್ಲ. ಇದೀಗ ಮೈ ಕೊಡವಿಕೊಂಡು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಹೋರಾಟ ನಡೆಸಬೇಕಿದೆ. ಇದು ಎಷ್ಟರ ಮಟ್ಟಿಗೆ ಸಾಧ್ಯ/ ಫಲ ಕೊಡಬಹುದೆಂದು ಕಾದು ನೋಡಬೇಕಷ್ಟೆ. – ಎಸ್.ಲಕ್ಷ್ಮಿನಾರಾಯಣ