ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಬಹುದಿನಗಳಿಂದ ಅವರು ಕಾಂಗ್ರೆಸ್ ತೊರೆಯುತ್ತಾರೆ ಎನ್ನುವ ವದಂತಿ ಸತ್ಯವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಚುನಾವಣೆ ಸಮಯದಲ್ಲಿ ಆ ಪಕ್ಷ ತೊರೆದಿದ್ದರು. ಬಳಿಕ 2003ರ ವಿಧಾನ ಸಭಾಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದರು. ಇದೀಗ ಕಾಂಗ್ರೆಸ್ಸಿಗೂ ವಿದಾಯ ಹೇಳಿರುವ ಯೋಗೇಶ್ವರ್, ತಮ್ಮ ನಡೆಯನ್ನು ನಿಗೂಢವಾಗಿರಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಬಿಜೆಪಿ ಸೇರಲು ಮಾತು ಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಸರ್ಕಾರ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿಲ್ಲ. ಅಲ್ಲದೆ, ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬಂತೆ ನನ್ನನ್ನು ಬಳಕೆ ಮಾಡಿಕೊಂಡಿದೆ. ನನ್ನ ಯಾವುದೇ ಯೋಜನೆಗಳಿಗೆ ಮನ್ನಣೆ ನೀಡಲಿಲ್ಲ. ಜಿಲ್ಲೆಯಲ್ಲಿನ ಕಾಂಗ್ರೆಸ್‌ನ ಪ್ರಬಲರು ನನ್ನನ್ನು ರಾಜಕೀಯವಾಗಿ ತುಳಿಯುವ ತಂತ್ರಗಾರಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಸರ್ಕಾರದಿಂದ ನನ್ನನ್ನು ಬೆಂಬಲಿಸಿದ ಮುಖಂಡರಿಗೆ, ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ” ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದ ಅವರು, “”ಕಾಂಗ್ರೆಸ್‌ನಲ್ಲಿ ತಮ್ಮನ್ನು ರಾಜಕೀಯವಾಗಿ ತುಳಿಯುವ ತಂತ್ರಗಳು ಹೆಚ್ಚಾದವು. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರು ತಮ್ಮನ್ನು ರಾಜಕೀಯ ವೈರಿ ಎಂದೇ ಭಾವಿಸಿದ್ದಾರೆ. ತಾವು ಮೊದಲ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾದಾಗ ತಮ್ಮ ಕಣ್ಮುಂದೆಯೇ ತಮ್ಮ ಟಿಕೆಟ್ ಹರಿದು ಹಾಕಿದರು. 2013ರ ಚುನಾವಣೆಯಲ್ಲಿ ಕೂಡ ತಮಗೆ ನೀಡುತ್ತಿದ್ದ ಟಿಕೆಟ್‌ನ್ನು ಬೇರೆಯವರಿಗೆ ಕೊಡಿಸಿದರು ಎಂದು ಕಿಡಿ ಕಾರಿದರು.
ಅ.22ಕ್ಕೆ ಕಾರ್ಯಕರ್ತರ ಸಭೆ:
ಯಾವ ಪಕ್ಷಕ್ಕೆ ಸೇರುತ್ತೀರಿ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ತಮ್ಮ 18 ವರ್ಷದ ರಾಜಕೀಯದಲ್ಲಿ ಎಲ್ಲಾ ನಿರ್ಧಾರಗಳನ್ನು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಕೈಗೊಂಡಿದ್ದೇನೆ. ಕಾಂಗ್ರೆಸ್ ತೊರೆಯುವ ಬಗ್ಗೆ ಕೂಡ ಎಲ್ಲಾ ಬೆಂಬಲಿಗರೊಂದಿಗೆ ಚರ್ಚಿಸಿದ್ದೇನೆ. ಅಕ್ಟೋಬರ್ 22ರಂದು ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದಿದ್ದು, ಚರ್ಚಿಸಿ, ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ತಿಳಿಸಿದರು.