ಬೆಂಗಳೂರು: ವಿಧಾನಸಭೆಯ 2018ರ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಜನವರಿ ಅಂತ್ಯದೊಳಗೆ ಸಿದ್ದಪಡಿಸಲಾಗುವುದು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಂಸದ ಎಂ. ವೀರಪ್ಪ ಮೋಯಿಲಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರು ವಿಭಾಗಗಳಲ್ಲಿ ಪ್ರಣಾಳಿಕೆ ಸಮಿತಿ ಸಭೆ ನಡೆಸಿ ಪ್ರಮುಖವಾಗಿ ಆರ್ಥಿಕ, ಸಾಮಾಜಿಕ ಹಾಗೂ ಕೈಗಾರಿಕೆ ಸೇರಿದಂತೆ ಐದು ಪ್ರಮುಖ ಅಂಶಗಳನ್ನಿಟ್ಟುಕೊಂಡು ಪ್ರಣಾಳಿಕೆ ಸಿದ್ದಪಡಿಸಲಾಗುತ್ತಿದೆ ಎಂದರು.
ಈಗಾಗಲೇ ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಸಭೆ ನಡೆಸಲಾಗಿದ್ದು, ಸೋಮವಾರ ಬೆಂಗಳೂರು ವಿಭಾಗದ ಸಭೆ ನಡೆಸಲಾಯಿತು. ಪ್ರಣಾಳಿಕೆ ಸಿದ್ದಪಡಿಸಲು 15 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಜಿಲ್ಲಾವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಉಪ ಸಮಿತಿಗಳು ವರದಿ ನೀಡಲಿವೆ. ಅದರ ಆಧಾರದಲ್ಲಿ ಜನವರಿ 11 ರಂದು ಪ್ರಣಾಳಿಕೆ ರಚನೆಯ ಅಂತಿಮ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ನಂತರ ಕೇಂದ್ರ ಸಮಿತಿಯ ಒಪ್ಪಿಗೆ ಪಡೆದು ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ 170 ಭರವಸೆಗಳಲ್ಲಿ 159 ಭರವಸೆಗಳನ್ನು ಈಡೇರಿಸಿದ್ದು, ಉಳಿದ 11 ಭರವಸೆಗಳನ್ನು ಅವಧಿ ಮುಗಿಯುವುದರೊಳಗಾಗಿ ಈಡೇರಿಸಲಾಗುವುದು. ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ರಾಜ್ಯದ ಸುಮಾರು 5 ಕೋಟಿ ಜನರು ಸರ್ಕಾರದ ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸದೇ ಇರುವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಸಹಕಾರ ಬ್ಯಾಂಕ್‌ಗಳಲ್ಲಿ 50 ಸಾವಿರದ ವರೆಗೆ ರೈತರು ಮಾಡಿರುವ ಸಾಲ ಮನ್ನಾ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತರ ನೆರವಿಗೆ ಬರದೇ ನಿರ್ಲಕ್ಷ ಧೋರಣೆ ಅನುಸರಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೈತರ 72 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿತ್ತು. ಸುಮಾರು 13 ಕೋಟಿ ರೈತರು ಇದರ ಫಲಾನುಭವಿಗಳಾಗಿದ್ದರು ಎಂದು ಅವರು ಹೇಳಿದರು.