Advertisement

18ಕ್ಕೆ ದೆಹಲಿಗೆ ಕಾಂಗ್ರೆಸ್‌ ನಾಯಕರು

06:30 AM Jul 16, 2018 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಸಂಬಂಧ ಪಕ್ಷದ ಹೈಕಮಾಂಡ್‌ ಜತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರ ಸಚಿವ ಡಿ.ಕೆ.ಶಿವಕುಮಾರ್‌ ಜತೆಯಾಗಿ ಜುಲೈ 18ರಂದು ದೆಹಲಿಗೆ ಹೋಗಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ನಗರದ ದತ್ತಾತ್ರೇಯ ವಾರ್ಡ್‌ನ ನಾಗಪ್ಪ ಸ್ಟ್ರೀಟ್‌ನ ಮೃತ ಪೌರ ಕಾರ್ಮಿಕ ಸುಬ್ರಮಣಿ ಅವರ ನಿವಾಸಕ್ಕೆ ಭೇಟಿ ನೀಡಿ 10 ಲಕ್ಷ ರೂ. ಪರಿಹಾರ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ಸಂಬಂಧಿಸಿದಂತೆ ಕರ್ನಾಟಕ ನಿಲುವಿನ ಕುರಿತು ಚರ್ಚಿಸಲು ಸಂಸದರ ಸಭೆ ದೆಹಲಿಯಲ್ಲಿ ನಡೆಯಲಿದೆ. ಅದೇ ವೇಳೆ ನಾವು ಹೈಕಮಾಂಡ್‌ ಭೇಟಿ ಮಾಡಿ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ರಚನೆಯ ನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಹಂಚಿಕೆ ಮಾಡಿಕೊಂಡಿದ್ದೇವೆ. ಆದರೆ, ಕಾಂಗ್ರೆಸ್‌ನಿಂದ ನಿಗಮ ಮಂಡಳಿಗೆ ಯಾರನ್ನು ನೇಮಿಸಬೇಕು ಎಂಬುದು ಇನ್ನಷ್ಟೇ ತೀರ್ಮಾನ ಆಗಬೇಕಿದೆ. ಈ ಕುರಿತು ಹೈಕಮಾಂಡ್‌ ಜತೆ ಚರ್ಚಿಸಿ, ಆದಷ್ಟು ಬೇಗ ಎಲ್ಲ ಸ್ಥಾನ ಭರ್ತಿ ಮಾಡಲಿದ್ದೇವೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಲೋಕಸಭಾ ಚುನಾವಣೆಗೆ ಸಾಮೂಹಿಕ ನಾಯಕತ್ವ
ಮುಂಬರಲಿರುವ ಲೋಕಸಭಾ ಚುನಾವಣೆಗೆ ಸಾಮೂಹಿಕ ನಾಯಕತ್ವದಡಿ ಕಾಂಗ್ರೆಸ್‌ ಸ್ಪರ್ಧೆಗೆ ಇಳಿಯಲಿದೆ ಎಂಬುದನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲಿದ್ದೇವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರು ಪಕ್ಷದಲ್ಲಿ ಇದ್ದಾರೆ. ಸಿದ್ದರಾಮಯ್ಯನವರೂ ನಮ್ಮ ನಾಯಕರೇ. ಹೀಗಾಗಿ ಎಲ್ಲರೂ ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದರು.

Advertisement

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಕ್ಷ ಕಾರ್ಯಕರ್ತರ ಸಂಘಟನೆ ಜಿಲ್ಲಾ, ತಾಲೂಕು ಮತ್ತು ಬೂತ್‌ ಮಟ್ಟದಲ್ಲಿ ವೇಗವಾಗಿ ನಡೆಯುತ್ತಿದೆ. ಕೆಪಿಸಿಸಿ ಹೊಸ ತಂಡ ರಚನೆಯಾಗಿದ್ದು, ಹುರುಪಿನಿಂದ ಕಾರ್ಯನಿರ್ವಹಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಅನ್ನಭಾಗ್ಯದ ಅಕ್ಕಿ ಪ್ರಮಾಣ ಇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್‌ ಸರ್ಕಾರದ ಎಲ್ಲ ಯೋಜನೆಗಳು ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಯುತ್ತದೆ. ಅಕ್ಕಿ ಪ್ರಮಾಣ ಏಳು ಕೆಜಿಗೆ ಏರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಮೇಲೆ ಯಾವುದೇ ಒತ್ತಡ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದಾಮಿ ಕ್ಷೇತ್ರದ ಅಭಿವೃದ್ಧಿಗೆ  ವಿಶೇಷ ಅನುದಾನ ಕೋರಿ ಪತ್ರ ಬರೆದಿದ್ದರು. ಯಾರು ಕೂಡ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೀದರ್‌ನಲ್ಲಿ ನಡೆದ ಮಕ್ಕಳ ಅಪಹರಣ ಹಾಗೂ ಹಲ್ಲೆ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇದೇವೇಳೆ ಸ್ಪಷ್ಟಪಡಿಸಿದರು.

ಸಿಎಂ ಹ್ಯಾಪಿಯಾಗಿದ್ದಾರೆ!
ನಾನು ಸಂತೋಷವಾಗಿಲ್ಲ ಎಂದು ಶನಿವಾರ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟಿದ್ದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌, ಹಾಗೇನೂ ಇಲ್ಲ, ಮುಖ್ಯಮಂತ್ರಿಗಳು ಹ್ಯಾಪಿಯಾಗಿ ಇದ್ದಾರೆ ಎಂದು ಸುಮ್ಮನಾದರು.

Advertisement

Udayavani is now on Telegram. Click here to join our channel and stay updated with the latest news.

Next