ಹಾಸನ : ಮೈತ್ರಿ ಸರ್ಕಾರಕ್ಕೆ ಸವಾಲೆನಿಸುವ ವಿದ್ಯಮಾನಗಳು ಜೆಡಿಎಸ್‌ನ ತವರು ಎನ್ನಲಾಗುವ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ನಡೆಯುತ್ತಿದ್ದು , ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರು ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ದ ಕೆಪಿಸಿಸಿಗೆ ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಅವರು ಬಹಿರಂಗವಾಗಿ ಹೇಳಿಕೊಂಡಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ತಿಳಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.
50 ಕ್ಕೂ ಹೆಚ್ಚು ಕಾಂಗ್ರೆಸ್‌ನ ಪ್ರಮುಖ ನಾಯಕರು ರೇವಣ್ಣ ಅವರ ವರ್ತನೆ ವಿರುದ್ಧ ರೊಚ್ಚಿಗೆದ್ದಿದ್ದು , ಕಾಂಗ್ರೆಸ್ ನಾಯಕರಿಗೆ ದೂರು ಸಲ್ಲಿಸಿದ್ದಾರೆ.
ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರ ಮೇಲೆ ದಬ್ಬಾಳಿಕೆ ತೋರುತ್ತಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಮೂಗು ತೋರುತ್ತಿದ್ದಾರೆ. ಕಾಂಗ್ರೆಸ್ ನಾಶಕ್ಕೆ ಯತ್ನ ನಡೆಯುತ್ತಿದೆ ಎಂದು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ.
ಈಗಾಗಲೇ ಮಾಜಿ ಸಚಿವ ಎ.ಮಂಜು ಅವರು ರೇವಣ್ಣ ವಿರುದ್ಧ ಬಹಿರಂಗ ಆಕ್ರೋಶವನ್ನೆ ಹೊರ ಹಾಕಿದ್ದರು. ಮಾತ್ರವಲ್ಲದೆ ಭೂಹಗರಣದ ಆರೋಪವನ್ನೂ ಮಾಡಿದ್ದರು.