Advertisement

ಬಿಜೆಪಿ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ ಪ್ರತಿಭಟನೆ

06:48 AM Jul 10, 2019 | Team Udayavani |

ಬೆಂಗಳೂರು: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಶಾಸಕರಿಗೆ ಬಿಜೆಪಿ ನಾಯಕರು ಹಣದ ಆಮಿಷವೊಡ್ಡಿ ರಾಜೀನಾಮೆ ಕೊಡಿಸುತ್ತಿದ್ದಾರೆಂದು ಆರೋಪಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷ ನಾಯಕ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ತಳ್ಳಿ ರಸ್ತೆಯಲ್ಲಿ ಚಳವಳಿ ಮಾಡಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದು, ಪರಿಸ್ಥಿತಿ ನಿಯಂತ್ರಿಸಿದರು.

ರಾಜ್ಯದ ಇತರೆಡೆಯೂ ಪ್ರತಿಭಟನೆ: ಇದೇ ವೇಳೆ, ಮೈಸೂರು, ಹಾಸನ, ಧಾರವಾಡ, ಶಿವಮೊಗ್ಗ, ಚಿತ್ರದುರ್ಗ, ರಾಯಚೂರು, ಚಿಕ್ಕಬಳ್ಳಾಪುರ, ರಾಮನಗರ ಸೇರಿ ರಾಜ್ಯದ ಇತರೆಡೆಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದ ಸೌಮ್ಯಾ ರೆಡ್ಡಿ ದೂರ: ಈ ಮಧ್ಯೆ, ಪಕ್ಷದ ಸೂಚನೆ ಮೇರೆಗೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನೆಯಿಂದ ದೂರ ಉಳಿದರು.

ತಮ್ಮ ತಂದೆ ರಾಮಲಿಂಗಾ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅವರೂ ರಾಜೀನಾಮೆ ನೀಡುತ್ತಾರೆ ಎನ್ನುವ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆಗೂ ಹಾಜರಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ, ನಂತರ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನೆಯಿಂದ ದೂರ ಉಳಿದರು.

Advertisement

ಶಾಸಕಾಂಗ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಇನ್ನೂ ತೀರ್ಮಾನ ಮಾಡಿಲ್ಲ. ನನ್ನ ತಂದೆ ಹಾಗೂ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ. ನಮ್ಮ ತಂದೆಯ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ. ಕಾಂಗ್ರೆಸ್‌ ನಾಯಕರು ನಮ್ಮ ತಂದೆಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ, ಅವರು ಬೇಸರಗೊಂಡಿದ್ದಾರೆ ಎಂದರು.

ಎಐಸಿಸಿ ಮಹಿಳಾ ಘಟಕದ ಕಾರ್ಯದರ್ಶಿಯಾಗಿರುವುದರಿಂದ ದೆಹಲಿಗೆ ತೆರಳಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸೋನಿಯಾ ಗಾಂಧಿಯವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರ ಬಳಿ ತಮ್ಮ ತಂದೆಯ ರಾಜೀನಾಮೆ ವಿಚಾರ ಚರ್ಚೆ ಮಾಡಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next