ರಾಯಚೂರು:ರಾಜ್ಯದಲ್ಲಿ ಲೋಕಸಭೆ, ವಿಧಾನ ಸಭೆಗಳ ಐದು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ವೇಳೆಯೇ ಉಂಟಾಗಿರುವ ಕಲ್ಲಿದ್ದಲು ಕೊರತೆ ಕಾಂಗ್ರೆಸ್, ಜೆಡಿಎಸ್‌ಗೆ ಬಿಜೆಪಿ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಈ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಉಭಯ ಪಕ್ಷದ ನಾಯಕರು ಹರಿಹಾಯುತ್ತಿದ್ದಾರೆ.
ಮೂಲಗಳ ಪ್ರಕಾರ ಕಲ್ಲಿದ್ದಲು ಕೊರತೆ ಕೇವಲ ಕರ್ನಾಟಕ ಮಾತ್ರವಲ್ಲದೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇದೆ. ಆದರೆ, ಜೆಡಿಎಸ್, ಕಾಂಗ್ರೆಸ್ ನಾಯಕರು ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕಲ್ಲಿದ್ದಲು ಕೊರತೆಗೆ ಕೇಂದ್ರ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯಕ್ಕೆ ಶೇ.50ಕ್ಕಿಂತ ಹೆಚ್ಚು ವಿದ್ಯುತ್‌ನ್ನು ಶಾಖೋತ್ಪನ್ನ ಕೇಂದ್ರಗಳಿಂದ ಪಡೆಯುತ್ತಿರುವ ಕಾರಣ ಕಲ್ಲಿದ್ದಲು ಕೊರತೆಯಾದಲ್ಲಿ ಸಹಜವಾಗಿಯೇ ರಾಜ್ಯಕ್ಕೆ ಬಿಸಿ ತಟ್ಟಲಿದೆ. ಆದರೆ, ಕಲ್ಲಿದ್ದಲು ಗಣಿ ಕಂಪನಿಗಳ ಜತೆಗಿನ ಒಪ್ಪಂದದಲ್ಲಿ ಈ ಹಿಂದೆಯೇ ಕೆಲ ಸಮಸ್ಯೆಗಳು ತಲೆದೋರಿತ್ತು. ಲಿಂಕೇಜ್ ಮೂಲಕ ಕೋಲ್ ನೀಡುತ್ತಿರುವ ಕಾರಣ ಯಾವ ಕ್ಷಣದಲ್ಲಾದರೂ ಪೂರೈಕೆ ಸ್ಥಗಿತ ಮಾಡಬಹುದು. ಇಲ್ಲವೇ ದುಬಾರಿ ದರಕ್ಕೆ ಖರೀದಿಸಿ ಎಂಬಂರ್ಥದಲ್ಲಿ ಗಣಿ ಕಂಪನಿಗಳು ತಗಾದೆ ತೆಗೆದಿದ್ದವು.
ಆರ್‌ಟಿಪಿಎಸ್ ನಾಲ್ಕು ಘಟಕ ಬಂದ್:
ಆರ್‌ಟಿಪಿಎಸ್ ಎಲ್ಲ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಾದರೆ ನಿತ್ಯ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಅಗತ್ಯವಿದೆ. ಆದರೆ, ಈಗ 10-12 ಮೆಟ್ರಿಕ್ ಟನ್ ಮಾತ್ರ ಬರುತ್ತಿದೆ. ಇದರಿಂದ ಎಂಟು ಘಟಕಗಳಲ್ಲಿ ನಾಲ್ಕು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ನಾಲ್ಕರಲ್ಲಿ ಆರನೇ ಘಟಕವನ್ನು ವಾರ್ಷಿಕ ದುರಸ್ತಿಗೆ ಪಡೆದಿದ್ದು, ಮೂರು ಸ್ಥಗಿತಗೊಂಡಿವೆ. ಉಳಿದ ನಾಲ್ಕು ಘಟಕಗಳಿಂದ 740 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
1600 ಮೆಗಾವ್ಯಾಟ್ ಸಾಮರ್ಥ್ಯದ ವೈಟಿಪಿಎಸ್‌ನಲ್ಲೂ ಒಂದೇ ಘಟಕದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಅಲ್ಲಿಗೆ ಆರ್‌ಟಿಪಿಎಸ್‌ನಿಂದಲೇ ಕಲ್ಲಿದ್ದಲು ಪೂರೈಸಬೇಕಿದೆ. ಬುಧವಾರ ಆರ್‌ಟಿಪಿಎಸ್‌ಗೆ ನಾಲ್ಕು, ವೈಟಿಪಿಎಸ್ 1 ರೇಕ್ ಕಲ್ಲಿದ್ದಲು ಬಂದಿದೆ. ಮಳೆಗಾಲದಲ್ಲಿ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದ ಕಾರಣ ಆರ್‌ಟಿಪಿಎಸ್‌ನಲ್ಲಿ ಹಿಂದಿನ ತಿಂಗಳು 4.5ಲಕ್ಷ ಮೆಟ್ರಿಕ್ ಟನ್ ಸಂಗ್ರಹವಿತ್ತು. ಆದರೆ, ಕಲ್ಲಿದ್ದಲು ಅಗತ್ಯ ಇಲ್ಲದಿದ್ದರೂ ಸಂಗ್ರಹಿಸಲು ಸ್ಥಳಾಭಾವ ಸಮಸ್ಯೆ ಎದುರಾಗುವ ಕಾರಣ, ಅದು ಕಷ್ಟಸಾಧ್ಯ. ಕಲ್ಲಿದ್ದಲು ಸಮಸ್ಯೆ ವಾರದೊಳಗೆ ಇತ್ಯರ್ಥಗೊಳ್ಳುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಧಿ ಕಾರಿಗಳು. ಒಂದು ವೇಳೆ ಹಾಗಾಗದಿದ್ದಲ್ಲಿ ರಾಜ್ಯಕ್ಕೆ ಲೋಡ್ ಶೆಡ್ಡಿಂಗ್ ಅನಿವಾರ್ಯ.
ಮಳೆ, ತಿತ್ಲಿ ಚಂಡಮಾರುತ ಕಾರಣ:
ಕಲ್ಲಿದ್ದಲು ಪೂರೈಕೆ ಕೊರತೆಗೆ ಗಣಿ ಪ್ರದೇಶಗಳಲ್ಲಿ ಬೀಳುತ್ತಿರುವ ಮಳೆ, ತಿತ್ಲಿ ಚಂಡಮಾರುತ ಕಾರಣ ಎನ್ನಲಾಗುತ್ತಿದೆ. ಸತತ ಮಳೆಯಿಂದ ಉತ್ಪಾದನೆ ಕುಂಠಿತಗೊಂಡಿದ್ದರಿಂದ ಪೂರೈಕೆ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ, ರಾಜ್ಯದಲ್ಲಿ ಶಾಖೋತ್ಪನ್ನ ಕೇಂದ್ರಗಳು ಹೆಚ್ಚಾಗಿದ್ದು, ಪ್ರತ್ಯೇಕ ಗಣಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಿಂದಿನ ಸರ್ಕಾರವೇ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಬೇಡಿಕೆಗೆ ತಕ್ಕ ಗಣಿ ನೀಡದ ಕಾರಣ ನಾವು ಕಾದು ನೋಡುವ ತಂತ್ರ ಅನುಸರಿಸಿದೆವು ಎನ್ನುತ್ತಾರೆ ಅಧಿಕಾರಿಗಳು.
– ಸಿದ್ಧಯ್ಯಸ್ವಾಮಿ ಕುಕನೂರು