Advertisement

ಪಟೇಲರ ಮೂಗಿಗೆ ತುಪ್ಪ ಸವರುತ್ತಿರುವ ಕಾಂಗ್ರೆಸ್‌

08:45 AM Nov 29, 2017 | Harsha Rao |

ಅಹಮದಾಬಾದ್‌: ಈ ಬಾರಿಯ ಗುಜರಾತ್‌ ಚುನಾವಣೆಯಲ್ಲಿ ತಾನು ಗೆದ್ದರೆ ಪಟೇಲರ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವುದಾಗಿ ಆಶ್ವಾಸನೆ ನೀಡಿರುವ ಕಾಂಗ್ರೆಸ್‌, ಯಾವ ರೀತಿ ಮೀಸಲಾತಿ ಕಲ್ಪಿಸಲಿದೆ ಎಂಬುದನ್ನು ಬಿಡಿಸಿ ಹೇಳಬೇಕೆಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಸವಾಲೆಸೆದಿದ್ದಾರೆ. 

Advertisement

ಮಂಗಳವಾರ ಮಾತನಾಡಿದ ಅವರು, “”ಮೀಸಲಾತಿ ಪ್ರಮಾ ಣ ಶೇ.50ರ ಗಡಿದಾಟಬಾರದೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಿರುವಾಗ, ಪಟೇಲರಿಗೆ ಮೀಸಲಾತಿ ಹೇಗೆ ಕಲ್ಪಿಸಲು ಸಾಧ್ಯ ಎಂಬುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು” ಎಂದ ಅವರು, ಕಾಂಗ್ರೆಸ್‌ನ ಈ ಆಶ್ವಾಸನೆ ರಾಜಕೀಯ ಅವಕಾಶ ವಾದದ ಪರಮಾವಧಿ ಎಂದು ಟೀಕಿಸಿದರು.  

ರಾಹುಲ್‌ ಉತ್ತರಿಸಲಿ: 2010ರಲ್ಲಿ ವೀಕಿಲೀಕ್ಸ್‌ ನಿಂದ ಬಹಿರಂಗಗೊಂಡಿದ್ದ ರಾಹುಲ್‌ ಗಾಂಧಿಯವರ “ಲಷ್ಕರ್‌ ಉಗ್ರ ಸಂಘಟನೆಗಿಂತ ಭಾರತದಲ್ಲಿನ ಹಿಂದೂ ಉಗ್ರವಾದ ಹೆಚ್ಚು ಅಪಾಯಕಾರಿ’ ಎಂಬ ಹೇಳಿಕೆಗೆ ರಾಹುಲ್‌ ಅವರೇ ಸಮರ್ಥನೆ ನೀಡಬೇಕೆಂದು ಸಚಿವ ಪ್ರಸಾದ್‌ ಆಗ್ರಹಿಸಿದರು. 

ಮೋದಿಯದ್ದು ಪಲಾಯನ ಸೂತ್ರ: ಕಾಂಗ್ರೆಸ್‌ ಕಿಡಿ 
ತಮ್ಮ ಆಡಳಿತ ವೈಫ‌ಲ್ಯ ಪ್ರಶ್ನಿಸುವವರಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಪ್ರಧಾನಿ ಮೋದಿ ಅವರು ಗುಜರಾತ್‌ ಜನತೆಯನ್ನು ತಮ್ಮ ಕಡೆಗೆ ಭಾವುಕವಾಗಿ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಬುಜ್‌ನ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ನನ್ನ ಬಡತನದ ಹಿನ್ನೆಲೆಯನ್ನು ಹೀಯಾಳಿಸದಿರಿ. ಗುಜರಾತ್‌ ಮಣ್ಣಿನ ಮಗನನ್ನು ಅವಮಾನಿಸಿದರೆ ಈ ರಾಜ್ಯದ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದರು. ಏತನ್ಮಧ್ಯೆ, ಗುಜರಾತ್‌ ಚುನಾವಣಾ ರ್ಯಾಲಿ ಗಳಲ್ಲಿ ತಮ್ಮ ವಿರುದ್ಧದ ಟೀಕೆಗಳಿಗಷ್ಟೇ ಉತ್ತರಿ ಸುತ್ತಿರುವ ಮೋದಿ ತಾವೊಬ್ಬ ಪ್ರಧಾನ ಮಂತ್ರಿ ಎಂದು ಮರೆತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ. ಮೋದಿ ಹೇಳಿದ “ಅಚ್ಛೇ ದಿನ್‌’ ಅವರು ಅಧಿಕಾರಕ್ಕೆ ಬಂದು 42 ತಿಂಗಳುಗಳಾದರೂ ಬಂದಿಲ್ಲ ಎಂದು ಲೇವಡಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next