Advertisement

Congress ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೇಲುಗೈ!

09:36 PM Jun 05, 2024 | Team Udayavani |

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಐದು ಕ್ಷೇತ್ರಗಳನ್ನು ಬಾಚಿಕೊಂಡಿರುವ ಕಾಂಗ್ರೆಸ್‌, ರಾಜ್ಯದ ಏಳು ಮೀಸಲು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆದ್ದಿದೆ. ಆದರೆ, ನಾಲ್ಕು ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದವು ಗಮನಾರ್ಹ!

Advertisement

ಕಾಂಗ್ರೆಸ್‌ ಗೆದ್ದಿರುವ 9 ಕ್ಷೇತ್ರಗಳ ಪೈಕಿ ನಾಲ್ಕು ಮೀಸಲು ಕ್ಷೇತ್ರಗಳಿವೆ. ಅದರಲ್ಲೂ 9ರಲ್ಲಿ ಐದು ಕ್ಷೇತ್ರಗಳು ಕಲ್ಯಾಣ ಕರ್ನಾಟಕ ಭಾಗದ ಕ್ಷೇತ್ರಗಳಾಗಿವೆ. ನಾಲ್ಕು ಮೀಸಲು ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದಿದೆ. ಅಲ್ಲದೆ, ಸೋತ ಮೂರು ಕ್ಷೇತ್ರಗಳಲ್ಲಿಯೂ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್‌ ಈ ಬಾರಿ ಪಡೆದುಕೊಂಡಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 51 ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 32 ಕಡೆ ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ ಅದೂ ಪುನರಾವರ್ತನೆ ಆಗಿದ್ದು, ಏಳು ಮೀಸಲು ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆದ್ದಿದೆ. ಕಲಬುರಗಿ, ರಾಯಚೂರು, ಬಳ್ಳಾರಿ, ಚಾಮರಾಜನಗರದಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ, ಚಿತ್ರದುರ್ಗ ಹಾಗೂ ವಿಜಯಪುರ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ, ಮೈತ್ರಿ ಕಾರಣಕ್ಕೆ ತನ್ನ ಬಳಿ ಇದ್ದ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಆ ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಂಡಿದೆ.

ಬಳ್ಳಾರಿ ಕ್ಷೇತ್ರ: ಬಳ್ಳಾರಿ ಮೀಸಲು ಕ್ಷೇತ್ರದಲ್ಲಿ 2018ರಲ್ಲಿ ನಡೆದಿದ್ದ ಉಪ ಚುನಾವಣೆಯ ಒಂದು ವರ್ಷದ ಅವಧಿ ಬಿಟ್ಟರೆ, 2004ರಿಂದ ಸತತವಾಗಿ ಇಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿತ್ತು. ಈ ಬಾರಿ ಶ್ರೀರಾಮುಲು ಅವರನ್ನು ಮಣಿಸುವ ಮೂಲಕ ತುಕರಾಂ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ತಂದು ಕೊಟ್ಟಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 5.60 ಲಕ್ಷ ಮತ ಪಡೆದಿದ್ದರೆ, ಈ ಬಾರಿ 7.30 ಲಕ್ಷ ಮತಗಳನ್ನು ಪಡೆದಿದ್ದಾರೆ.

ಕಲಬುರಗಿ ಕ್ಷೇತ್ರ: ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಲಬುರಗಿಯಲ್ಲಿ ಕಳೆದ ಬಾರಿ ಡಾ. ಉಮೇಶ್‌ ಜಾಧವ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ಈ ಬಾರಿ ತಮ್ಮ ಅಳಿಯನ ಮೂಲಕ ಖರ್ಗೆಯವರು ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ 5.24 ಲಕ್ಷ ಮತ ಪಡೆದಿದ್ದರೆ, ಈ ಬಾರಿ 6.25 ಲಕ್ಷ ಮತಗಳನ್ನು ಪಡೆದಿದೆ.

Advertisement

ರಾಯಚೂರು ಕ್ಷೇತ್ರ: ರಾಯಚೂರು ಕ್ಷೇತ್ರದಲ್ಲಿ 2009 ಮತ್ತು 2019ರಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ 4.80 ಲಕ್ಷ ಮತ ಗಳಿಸಿದ್ದರೆ, ಈ ಬಾರಿ 6.70 ಲಕ್ಷ ಮತಗಳನ್ನು ಪಡೆದಿದೆ.

ಚಾಮರಾಜನಗರ ಕ್ಷೇತ್ರ: ಚಾಮರಾಜನಗರದಲ್ಲಿ 2019ರಲ್ಲಿ ಮೊದಲ ಬಾರಿ ಬಿಜೆಪಿ ಖಾತೆ ತೆರೆದಿತ್ತು. ಮೂಲತಃ ಕಾಂಗ್ರೆಸ್‌ನವರಾದ ವಿ. ಶ್ರೀನಿವಾಸ್‌ ಪ್ರಸಾದ್‌ ಇಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್‌ ಗೆದ್ದಿದೆ. ಕಳೆದ ಬಾರಿ ಕಾಂಗ್ರೆಸ್‌ 5.66 ಲಕ್ಷ ಮತ ಪಡೆದಿದ್ದರೆ, ಈ ಬಾರಿ 7.51ಲಕ್ಷ ಮತಗಳನ್ನು ಪಡೆದಿದೆ.

ಚಿತ್ರದುರ್ಗ ಕ್ಷೇತ್ರ: ಚಿತ್ರದುರ್ಗದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಸೋತಿದೆ. ಕಳೆದ ಬಾರಿ ಕಾಂಗ್ರೆಸ್‌ 5.46 ಲಕ್ಷ ಮತಗಳನ್ನು ಪಡೆದಿದ್ದರೆ, ಈ ಬಾರಿ 6.36 ಲಕ್ಷ ಮತಗಳನ್ನು ಪಡೆದಿದೆ. ಇಲ್ಲಿ ಎರಡೂ ಬಾರಿ ಬಿ.ಎನ್‌. ಚಂದ್ರಪ್ಪ ಸೋತಿದ್ದಾರೆ.

ವಿಜಯಪುರ ಕ್ಷೇತ್ರ: ವಿಜಯಪುರದಲ್ಲಿ ಕಳೆದ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಡಾ. ಸುನೀತಾ ಚೌಹಾಣ್‌ ಸ್ಪರ್ಧಿಸಿ ಸೋತಿದ್ದರು. ಕೋಲಾರದಲ್ಲಿ ಸತತ ಏಳು ಬಾರಿ ಗೆದ್ದಿದ್ದ ಕೆ.ಎಚ್‌. ಮುನಿಯಪ್ಪ 2019ರಲ್ಲಿ ಸೋತರು. ಇಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಕಳೆದ ಬಾರಿ ಕಾಂಗ್ರೆಸ್‌ 4.99 ಲಕ್ಷ ಮತ ಗಳಿಸಿತ್ತು. ಈ ಬಾರಿ 6.20 ಲಕ್ಷ ಮತಗಳನ್ನು ಪಡೆದಿದೆ.

ಸುರಪುರ ಸಹ ಮರು ವಶಕ್ಕೆ
ರಾಜಾ ವೆಂಕಟಪ್ಪ ನಾಯಕ್‌ ಅವರ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ (ಎಸ್ಟಿ ಮೀಸಲು) ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್‌ ಗೆಲ್ಲುವ ಮೂಲಕ ಆ ವಿಧಾನಸಭಾ ಕ್ಷೇತ್ರವನ್ನೂ ಕಾಂಗ್ರೆಸ್‌ ಮರು ವಶಕ್ಕೆ ಪಡೆದುಕೊಂಡತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next