ಲೋಕಾಪುರ: ಕಬ್ಬು ಬೆಳೆಗಾರರಿಗೆ ಕಬ್ಬಿನ ದರ ಸಿಗದೇ ಇರುವುದಕ್ಕೆ ಕಾಂಗ್ರೆಸ್ ಪಕ್ಷದ ರೈತ ವಿರೋಧಿ ನೀತಿ ಕಾರಣ. ಆದರೆ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕೆಂದು ಕೇಂದ್ರ ಸರಕಾರದ ಎಫ್‌ಆರ್‌ಪಿ ಬೆಲೆಗೆ ಹೆಚ್ಚಿನ ಬೆಲೆ ರೈತರಿಗೆ ಸಿಗಬೇಕು ಎಂಬ ಕಳಕಳಿಯೊಂದಿಗೆ ಆರಂಭವಾಗಿದೆ. ಎಸ್‌ಎಪಿ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಇದು ಕಾರ್ಖಾನೆ ಆಡಳಿತ ಮಂಡಳಿ, ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಸರ್ಕಾರ ಸೇರಿ ದರ ನಿಗದಿಯಾಗುತ್ತಿತ್ತು. ಆದರೆ, 2013ರಲ್ಲಿ ಮುಖ್ಯ ಮಂತ್ರಿಯಾದ ಸಿದ್ರಾಮಯ್ಯ ಇದನ್ನು ರದ್ದು
ಪಡಿಸಿದ್ದಾರೆ. ಸರ್ಕಾರದ ಭಾಗವಾಗಿದ್ದ ಆರ್.ಬಿ. ತಿಮ್ಮಾಪುರ ಅಂದು ಏನು ಮಾಡುತ್ತಿದ್ದರು. ಸಕ್ಕರೆ ಲಾಬಿಗೆ ಮಣಿದು ಎಸ್‌ಎಪಿ ರದ್ದು ಮಾಡಿದವರ ಫಲವೇ ಇಂದು ರೈತರು ದರಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ಹನಮಂತ ತುಳಸಿಗೇರಿ ಮಾತನಾಡಿ, ಆರ್.ಬಿ. ತಿಮ್ಮಾಪುರ ಸಕ್ಕರೆ ಸಚಿವರಾಗಿದ್ದಾಗ ಕಬ್ಬು ಬೆಳೆಗಾರರಿಗೆ ಏನು ಮಾಡಿದ್ದಾರೆ ಎಂಬುದನ್ನು ಕಬ್ಬು ಬೆಳೆಗಾರರನ್ನು ಕೇಳಿ ತಿಳಿದುಕೊಳ್ಳಿ. ಈಗ ಚುನಾವಣೆ ಹತ್ತಿರವಾಗಿದೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯುವುದು ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಶೋಭೆ ತರುವುದಿಲ್ಲ. ರೈತರಿಗೆ ಬೆಂಬಲವಾಗಿ ಅವರು ನಿಂತಿರುವುದನ್ನು ಕಬ್ಬು ಬೆಳೆಗಾರರೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ ಮಾತನಾಡಿ, ಆರ್.ಬಿ. ತಿಮ್ಮಾಪುರ ಅವರ ಮಾತಿಗೆ ಕವಡೇ ಕಾಸಿನ ಕಿಮ್ಮತ್ತು ಇಲ್ಲವೇ ಇಲ್ಲ ಕಾರಜೋಳ ಅವರು ಸಚಿವರಿದ್ದಾಗ ರೈತರ ಮೇಲೆ ಒಂದೇ ಒಂದು ಕೇಸ ಹಾಕಿಲ್ಲ. ಬಿ.ಜೆ.ಪಿ ಸರ್ಕಾರ ಇದ್ದಾಗ ರೈತರ ಮೇಲೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆದು ರೈತ ಹೋರಾಟಗಾರರ ಬೆಂಬಲಕ್ಕೆ ನಿಂತಿರುವುದು ಬಹಿರಂಗ ಸತ್ಯ. ವಿನಾಕಾರಣ ಕಾರಜೋಳ ಅವರ ಮೇಲೆ ಆರ್.ಬಿ.ತಿಮ್ಮಾಪುರ ಮಾಡುತ್ತಿರುವ ಎಲ್ಲ ಆರೋಪ ಹಸಿ ಸುಳ್ಳು ರಾಜಕೀಯ ಪ್ರೇರಿತ.
ಚುನಾವಣೆ ಸನಿಹವಾಗುತ್ತಿರುವುದರಿಂದ ಆರ್ .ಬಿ.ತಿಮ್ಮಾಪುರ ಅವರಿಗೆ ನಿದ್ದೆ ಹತ್ತುತ್ತಿಲ್ಲ. ಒಂದೆಡೆ ಟಿಕೆಟ್ ಖಾತ್ರಿ ಇಲ್ಲದೇ ನಿದ್ದೆ ಹತ್ತದೇ ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಆರ್.ಬಿ.ತಿಮ್ಮಾಪುರ ಅವರ ರಾಜಕೀಯ ಡೊಂಬರಾಟವನ್ನು ಜನರು ಅರೆತಿದ್ದಾರೆ. ಅವರ ನಾಟಕ ನಡೆಯುವುದಿಲ್ಲ ಎಂದು ಹೇಳಿದರು.
ಬಿಜೆಪಿ ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ, ಕೆ.ಆರ್. ಮಾಚಪ್ಪನ್ನವರ, ನಾಗಪ್ಪ ಅಂಬಿ, ಬಸವರಾಜ ಮಳಲಿ, ಲೋಕಣ್ಣ ಕತ್ತಿ ಮಾತನಾಡಿದರು. ಬಿ. ವಿ. ಹಲಕಿ, ಯಮನಪ್ಪ ಹೊರಟ್ಟಿ, ಬಿ.ಎಲ್ ಬಬಲಾದಿ, ಪ್ರಕಾಶ ಚುಳಕಿ, ಆನಂದ ಹವಳಖೋಡ, ಅರುಣ ನರಗುಂದ, ಹೊಳಬಸು ಕಾಜಗಾರ, ಹಣಮಂತ ಕುಡಚಿ, ಕೃಷ್ಣಾ ಸಾಳುಂಕೆ, ರಾಮಪ್ಪ ಕಿಲಾರಿ, ಅರುಣ ಮುಧೋಳ, ಬಿಜೆಪಿ ಕಾರ್ಯಕರ್ತರು ಇದ್ದರು.