ಹಾರೋಹಳ್ಳಿ: ಕೊರೊನಾ ಬಂದಾಗ ಮನೆಯಲ್ಲಿ ಕುಳಿತು ಕೊಳ್ಳದೆ ತಮ್ಮ ಕೈಲಾದ ಸಹಾಯವನ್ನು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕ್ಷೇತ್ರದ ಜನತೆಗೆ ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕೊಟ್ಟು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಲು ಅನುಕೂಲ ಮಾಡಿ ಕೊಡಬೇಕು ಎಂದು ಕಾಂಗ್ರೆಸ್ ಮುಖಂಡರಾದ ಡಿ.ಎಂ.ವಿಶ್ವನಾಥ್ ಮತದಾರರಲ್ಲಿ ಮನವಿ ಮಾಡಿದರು.
ಚೀಲೂರು ಗ್ರಾಪಂ ವ್ಯಾಪ್ತಿಯ ರಸ್ತೆ ಜಕ್ಕಸಂದ್ರ ಬನ್ನಿಕುಪ್ಪೆ ಚೀಲೂರು ಯಡವನಳ್ಳಿ ಗ್ರಾಮಗಳಲ್ಲಿ ಬೂತ್ ಮಟ್ಟದ ಮುಖಂಡರು, ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದರು.
ಜನತೆ ಕಷ್ಟಕ್ಕೆ ಸ್ಪಂದಿಸಿಲ್ಲ: ರಾಮನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು 2 ಬಾರಿ ಮುಖ್ಯಮಂತ್ರಿಯಾಗಿದ್ದವರು. ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಜತೆಗೆ ಅವರ ಪತ್ನಿಯನ್ನು 2 ಬಾರಿ ಗೆಲ್ಲಿಸಿದ್ದೀರಿ. ಆದರೆ, ಕ್ಷೇತ್ರದ ಜನತೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋದಾಗ ಮನೆಯಲ್ಲಿ ಇದ್ದರೂ ಇಲ್ಲವೆಂದು ಹೇಳಿಸಿ ಕಳುಹಿಸಿದ್ದಾರೆ. ಈಗ ಅವರ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಆರೋಪಿಸಿದರು.
ಜನತೆ ಕಷ್ಟದಲ್ಲಿ ಭಾಗಿಯಾಗಿದ್ದೇನೆ: ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮಾತನಾಡಿ, 2018ರಲ್ಲಿ ನನಗೆ ನಿರೀಕ್ಷೆಗೂ ಮೀರಿ ಈ ಕ್ಷೇತ್ರದ ಜನತೆ ಮತ ಕೊಟ್ಟದ್ದೀರಿ. ಆದರೆ, ಗೆಲ್ಲಲು ಸಾಧ್ಯವಾಗಲಿಲ್ಲ. ಆದರೂ, ನಾನು ಧೃತಿಗೆಡದೆ ಮನೆಯಲ್ಲಿ ಕುಳಿತುಕೊಳ್ಳದೆ ನನ್ನ ಕೈಲಾದ ಮಟ್ಟಿಗೆ ಈ ಕ್ಷೇತ್ರದ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಸೇವೆ ಮಾಡಬೇಕಾದರೆ ನನಗೆ ಈ ಬಾರಿ ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ, ಬಮುಲ್ ಹರೀಶ್ ಕುಮಾರ್, ಗ್ರಾಪಂ ಅಧ್ಯಕ್ಷ ಹೊನ್ನಗಿರಿಗೌಡ, ಮುಖಂಡರಾದ ಜಕ್ಕಸಂದ್ರ ಕುಮಾರ್, ಕೇಬಲ್ ರವಿ ಮತ್ತಿತರರು ಉಪಸ್ಥಿತರಿದ್ದರು.