Advertisement

ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣ

03:25 PM Feb 16, 2022 | Team Udayavani |

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ.

Advertisement

ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ” ಸದನ ಏನು ನಿನ್ನ ಅಪ್ಪನದಾ ? ” ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ” ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು.

ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ.

ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ” ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ” ಎಂದು  ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ” ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು.

Advertisement

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

ರಾಷ್ಟ್ರ ದ್ರೋಹದ ಪ್ರಕರಣಕ್ಕೆ ಒತ್ತಾಯ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸ್ವಯಂ ಪ್ರೇರಣೆಯಿಂದ ಸಂಪುಟದಿಂದ ಕೈ ಬಿಟ್ಟು ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಈಶ್ವರಪ್ಪ ನೀಡಿರುವ ಹೇಳಿಕೆ ವಿರೋಧಿಸಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಅವರು, ಧ್ವಜ ಸಂಹಿತೆ ಪ್ರಕಾರ, ಇದು ಮೂರರಿಂದ ಐದು ವರ್ಷದ ವರೆಗಿನ ಶಿಕ್ಷಾರ್ಹ ಅಪರಾಧ. ಮತ್ತು ದೇಶ ದ್ರೋಹಕ್ಕೆ ಸಮಾನವಾದ ಅಪರಾಧ. ಇಷ್ಟು ದಿನವಾದರೂ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಸಿಎಂ ಬೊಮ್ಮಾಯಿ ಅವರು ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು. ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ನಿಂದಿಸಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಕೆಂಪು ಕೋಟೆಯಲ್ಲಿ ಖಲಿಸ್ತಾನ ಧ್ವಜ ಹಾರಿಸಿದ್ದನ್ನು ನೀವು ಸಮರ್ಥಿಸಿದ್ದೀರಿ ಎಂದು ಹೇಳಿದೃ, ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಹೋದವರನ್ನು ಕಾಂಗ್ರೆಸ್ ಗುಂಡಿಟ್ಟು ಕೊಂದಿದೆ ಎಂದು ಆರೋಪಿಸಿದರು. ಇದರಿಂದ ಸದನದಲ್ಲಿ ತೀವ್ರ ಗದ್ದಲ ನಿರ್ಮಾಣವಾಯಿತು.

ರಾಷ್ಟ್ರ ಧ್ವಜದ ಇತಿಹಾಸದ ಬಗ್ಗೆ ಸಿದ್ದರಾಮಯ್ಯ ಹಳೆ ಇತಿಹಾಸ ಪ್ರಸ್ತಾಪಿಸಿದರು.ಹಿಂದೆ ಧ್ವಜ ಸಮಿತಿ‌ ಮಾಡಿದ್ದರಲ್ಲ ಅದರ ಬಗ್ಗೆ ಪ್ರಸ್ತಾಪಿಸಿ ಎಂದರು. ನೀವು ಚರ್ಚೆಗೆ ಅವಕಾಶ ಕೊಟ್ಟರೆ ಅದನ್ನು ಹೇಳುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು.

ಚರ್ಚೆ ಸುಗಮವಾಗಿ ನಡೆಯುತ್ತಿರುವಾಗ ಮಧ್ಯ‌ಪ್ರವೇಶ ಮಾಡಿದ ಗೃಹ ಸಚಿವ ಜ್ಞಾನೇಂದ್ರ ” ಈಗಾಗಲೇ ಅವರು ಹಿಜಾಬ್ ನಿಂದ‌ ಹೈರಾಣಾಗಿದ್ದಾರೆ. ಅದನ್ನು ಮರೆಮಾಚುವುದಕ್ಕೆ ಧ್ವಜದ ವಿಚಾರ ತೆಗೆದಿದ್ದಾರೆ ” ಎಂದು ಹೇಳಿದ್ದ ರಿಂದ ಸದನದಲ್ಲಿ ಮತ್ತೆ ಗದ್ದಲ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next