ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಗೊಂದಲ ಮುಂದುವರಿದಿದೆ. ಕಾರ್ಯದಕ್ಷತೆಯ ಕೊರತೆ ಹಿನ್ನೆಲೆಯಲ್ಲಿ ಸುಮಾರು 14 ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ಕೆಪಿಸಿಸಿ ನಿರ್ಧರಿಸಿತ್ತು. ಚುನಾವಣೆ ದೃಷ್ಟಿಯಿಂದ ಸಕ್ರಿಯರಾಗಿರುವವರನ್ನು ನೇಮಿಸಲು ತೀರ್ಮಾನಿಸಲಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ
ಹಾಲಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಕೆಲವು ಪ್ರಭಾವಿ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಆಂಜನೇಯಲು ಬದಲಾಯಿಸಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ವಿಜಯಪುರದ ಹಾಲಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲರನ್ನೇ
ಮುಂದುವರಿಸುವಂತೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಪಟ್ಟು ಹಿಡಿದಿದ್ದಾರೆಂದು ತಿಳಿದು ಬಂದಿದೆ.
ರಾಯಚೂರು ಜಿಲ್ಲೆಯಲ್ಲಿ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಯಾವುದೇ ಹೆಸರು ಅಧಿಕೃತಗೊಂಡಿಲ್ಲ. ರಾಮನಗರದ ಹಾಲಿ ಅಧ್ಯಕ್ಷರ ಬದಲಾವಣೆಗೆ ಒಪ್ಪಿಗೆ ದೊರೆತಿದ್ದರೂ ಜಿಲ್ಲಾ ಘಟಕ ಯಾವುದೇ ಹೆಸರು ಸೂಚಿಸದಿರುವುದು ಗೊಂದಲ ಮುಂದುವರಿಯಲು ಕಾರಣವಾಗಿದೆ.
ಮಂಡ್ಯ ಜಿಲ್ಲಾಧ್ಯಕ್ಷರಾಗಿ ವಿವೇಕಾನಂದ, ಹಾಸನ ಜಿಲ್ಲಾಧ್ಯಕ್ಷರಾಗಿ ಎಸ್.ಎಂ. ಆನಂದ, ಬೆಂಗಳೂರು ದಕ್ಷಿಣ ಲೊಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಗುರಪ್ಪನಾಯ್ಡು, ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಹಾಲಿ ನಗರ ಘಟಕದ ಶೇಖರ್ ಅವರೇ ಮುಂದುವರಿಸಲು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಬ್ದುಲ್ ವಾಜಿದ್ ಹೆಸರು ಅಂತಿಮಗೊಂಡಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಉಳಿದಂತೆ ಕೊಡಗು, ಮಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧ್ಯಕ್ಷರ ಬದಲಾವಣೆ ಗೊಂದಲವನ್ನು ಆದಷ್ಟು ಬೇಗ ಪರಿಹರಿಸುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದ್ದರು. ದೀಪಾವಳಿಗೂ ಮೊದಲು ಜಿಲ್ಲಾಧ್ಯಕ್ಷರ ಬದಲಾವಣೆ ಗೊಂದಲ ಮುಗಿಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.