ಬೆಳ್ಮಣ್: ಸರಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಸಲ್ಲದು. ವಿದ್ಯಾರ್ಥಿಗಳಿಗೆ ಎಲ್ಲವೂ ಉಚಿತವಾಗಿ ದೊರೆಯುತ್ತಿರುವ ಈಗಿನ ಕಾಲದಲ್ಲಿ ಇಂತಹ ಶಾಲೆಗಳನ್ನುಳಿಸಲು ಶಿಕ್ಷಕರು, ಹೆತ್ತವರು ಸಹಕರಿಸಬೇಕು. ದಾನಿಗಳು ಹಾಗೂ ಶಿಕ್ಷಣಾಭಿಮಾನಿಗಳ ಒಲವಿನಿಂದಾಗಿ ಇಂತಹ ಶಾಲೆಗಳು ಈಗಲೂ ಉಳಿದಿವೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರ ಮುಂಡ್ಕೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ವಿವಿಧ ಶಿಕ್ಷಣ ಪೂರಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
Advertisement
ಮುಂಡ್ಕೂರಿನ ಆಶ್ರಯ ಟ್ರಸ್ಟ್‌ನ ಸಂಸ್ಥಾಪಕ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ಚಿತ್ರನಟ, ನಾನಾ ಪಾಟೇಕರ್ ಪ್ರಾಯೋಜಕತ್ವದ ನವೀಕೃತ ಕಂಪ್ಯೂಟರ್ ಕೊಠಡಿ, ವಾಚನಾಲಯ ಉದ್ಘಾಟನೆ, ಆಶ್ರಯ ಟ್ರಸ್ಟ್ ವತಿಯಿಂದ ಸಮವಸ್ತ್ರ, ಕ್ರೀಡಾ ಸಮವಸ್ತ್ರ ವಿತರಣೆ ಹಾಗೂ ಶಾಲಾ ಶತಮಾನೋತ್ಸವ ಸಮಿತಿ ಮತ್ತು ಟ್ರಸ್ಟ್ ವತಿಯಿಂದ ನೋಟ್ ಪುಸ್ತಕ ವಿತರಣೆ ನಡೆಯಿತು.
ಮುಂಡ್ಕೂರು ಸರಕಾರಿ ಶಾಲೆ ವಾರ್ಷಿಕವಾಗಿ ವಿವಿಧ ಶೈಕ್ಷಣಿಕ ಯೋಜನೆಗಳೊಂದಿಗೆ ವಿದ್ಯಾಶ್ರಯ ಟ್ರಸ್ಟ್ ಸುಮಾರು 20 ಲಕ್ಷ ರೂ. ವ್ಯಯಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪರಿಣಾಮವಾಗಿ 90ಕ್ಕೆ ಇಳಿದಿದ್ದ ವಿದ್ಯಾರ್ಥಿಗಳ ಸಂಖ್ಯೆ 143ಕ್ಕೇರಿದೆ ಎಂದು ಆಶ್ರಯದ ಸಂಸ್ಥಾಪಕ ಸುಧಾಕರ ಶೆಟ್ಟಿ ತಿಳಿಸಿದರು. ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಶುಭಾ ಪಿ. ಶೆೆಟ್ಟಿ ಅಧ್ಯಕ್ಷತೆ
ವಹಿಸಿದ್ದರು. ಮುಂಡ್ಕೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಟ್ರಸ್ಟ್ ಸದಸ್ಯ ಎಂ.ಜಿ. ಕರ್ಕೇರ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಪಿ. ಬಾಲಕೃಷ್ಣ ಆಳ್ವ, ಅಧ್ಯಕ್ಷ ಅಶೋಕ ಶೆಟ್ಟಿ, ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಮುಂಡ್ಕೂರು ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಶಾರದಾ ಬಿ., ಆಶ್ರಯ ಬಾಲವಾಡಿಯ ಮುಖ್ಯ ಶಿಕ್ಷಕಿ ಪ್ರಭಾ ಶತಾನಂದ, ಎಸ್‌ಡಿಎಂಸಿ ಆಧ್ಯಕ್ಷ ಗುರುನಾಥ ಪೂಜಾರಿ, ಉಪಾಧ್ಯಕ್ಷೆ ಗಾಯತ್ರಿ ಸಪಳಿಗ ಮೊದಲಾದವರು ಉಪಸ್ಥಿತರಿದ್ದರು.
Related Articles
Advertisement
ಆಶ್ರಯದ ಮುಖ್ಯಸ್ಥ ಸುಧಾಕರ ಶೆಟ್ಟಿ ಅವರ ಆಪ್ತರಾಗಿರುವ ನಾನಾ ಪಾಟೇಕರ್ ಕಳೆದ ವರ್ಷ ಎರಡು ಬಾರಿ ಈ ಶಾಲೆಗೆ ಭೇಟಿ ನೀಡಿದ್ದು ಶಿಕ್ಷಣ ಪೂರಕ ಯೋಜನೆಗಳಿಗೆ ಸಹಕರಿಸುವುದಾಗಿ ತಿಳಿಸಿದ್ದರು. ಇದೀಗ ಶಾಲೆಯ ಕಂಪ್ಯೂಟರ್ ಕೊಠಡಿ ಹಾಗೂ ವಾಚನಾಲಯದ ನವೀಕರಣ ನಾನಾ ಅವರ ಸಹಕಾರದಿಂದ ನಡೆದಿದೆ.