ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್‌ಟಿಇ) ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ.25ರಷ್ಟು ಸೀಟು ಹಂಚಿಕೆಗೆ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆ ಏ.28ರ ಮಧ್ಯಾಹ್ನ 3 ಗಂಟೆಗೆ ಸರ್ವಶಿಕ್ಷಾ ಅಭಿಯಾನದಲ್ಲಿ ನಡೆಯಲಿದೆ.
ಹೆಚ್ಚು ಅರ್ಜಿಗಳು ಬಂದಿರುವ ಸೀಟುಗಳಿಗೆ ಲಾಟರಿ ಎತ್ತುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುತ್ತಿದೆ ಸರ್ವಶಿಕ್ಷಾ ಅಭಿಯಾನದ ಮೂರನೇ ಮಹಡಿಯ ಸಭಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಲಾಟರಿ ಪ್ರಕ್ರಿಯೆ ನಡೆಯಲಿದೆ.
2017-18ನೇ ಸಾಲಿನಲ್ಲಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ 1,32,706 ಸೀಟು ಲಭ್ಯವಿದ್ದು, 2,10,661 ಅರ್ಜಿ ಸಲ್ಲಿಕೆಯಾಗಿದೆ. ಒಂದೇ ಶಾಲೆಗೆ ಹತ್ತಾರು ಅರ್ಜಿಗಳು ಬಂದಿರುವುದರಿಂದ ಆನ್‌ಲೈನ್ ಲಾಟರಿ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.ವಿಶೇಷ ಆದ್ಯತೆ ಮೇರೆಗೆ ನೀಡುವ ಸೀಟುಗಳನ್ನು ಪ್ರತ್ಯೇಕ ಮಾಡಲಾಗಿದೆ. ಆರಂಭದಲ್ಲಿ ವಿಶೇಷ ಆದ್ಯತೆ ಮಕ್ಕಳಿಗೆ ಸೀಟು ಹಂಚಿಕೆಯಾಗುತ್ತದೆ. ಈ ವಿಭಾಗದಲ್ಲಿ ಆತ್ಮಹತ್ಯೆ ಹೊಂದಿದ ರೈತರ ಮಕ್ಕಳು, ಎಚ್‌ಐವಿ ಪೀಡಿತ ಮಕ್ಕಳು, ತೃತೀಯ ಲಿಂಗಿಗಳು, ವಲಸಿಗರ ಮಕ್ಕಳು, ಬೀದಿ ವಾಸಿಗಳ ಮಕ್ಕಳು, ವಿಕಲಚೇತನ ಮಕ್ಕಳು ಸೇರಿಕೊಂಡಿರುತ್ತಾರೆ.
ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿ ಉಳಿದ ಸೀಟುಗಳಿಗೆ ಎರಡನೇ ಹಂತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಲಾಟರಿ ಮೂಲಕ ಸೀಟು ಪಡೆದ ಮಕ್ಕಳ ಪಾಲಕರ ಮೊಬೈಲ್‌ಗೆ ತಕ್ಷಣ ಸಂದೇಶ ಹೋಗುತ್ತದೆ. ಯಾವ ಶಾಲೆಗೆ, ಎಷ್ಟು ದಿನದಲ್ಲಿ ಮಗುವನ್ನು ದಾಖಲಿಸಿಬೇಕು ಎಂಬಿತ್ಯಾದಿ ವಿವರ ಆ ಸಂದೇಶದಲ್ಲಿ ಇರುತ್ತದೆ.
ಅರ್ಜಿ ಸಲ್ಲಿಕೆ ವಿವರ
ಆತ್ಮಹತ್ಯೆ ಹೊಂದಿದ ರೈತರ ಮಕ್ಕಳ ವಿಭಾಗದಲ್ಲಿ -402, ಎಚ್‌ಐವಿ ಪೀಡಿತ ಮಕ್ಕಳಿಂದ -15, ಅನಾಥರು -411, ತೃತೀಯಲಿಂಗಿಗಳು- 104, ವಲಸಿಗರು ಮತ್ತು ಬೀದಿಬದಿ ವಾಸಿಗಳ ಮಕ್ಕಳು-528, ಅಂಗವಿಕಲ ಮಕ್ಕಳು-3548 ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ, ಪರಿಶಿಷ್ಟ ಜಾತಿಯ 25,645, ಪರಿಶಿಷ್ಟ ಪಂಗಡದ 7,722, ಪ್ರವರ್ಗ-1ರ 43,727, ಪ್ರವರ್ಗ 2ಬಿ 54,204, ಪ್ರವರ್ಗ-3ಎ 18,056, ಪ್ರವರ್ಗ 3ಬಿ 27,946 ಮತ್ತು ದುರ್ಬಲ ವರ್ಗದಿಂದ 14,312 ಅರ್ಜಿ ಬಂದಿದೆ.