ಬೆಳಗಾವಿ: ಹೆಣ್ಣುಭ್ರೂಣ ಹತ್ಯೆಯನ್ನು ಕೊಲೆಗೆ ಸಮಾನ ಅಪ ರಾಧ ಎಂದು ಪರಿಗಣಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ತಡೆಗೆ ಸಮಗ್ರ ನೀತಿ ರೂಪಿಸುವ ಜತೆಗೆ ಪೊಲೀಸ್ ಇಲಾಖೆಯ ಜತೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.
ಭ್ರೂಣ ಹತ್ಯೆ ಪ್ರಕರಣ ಬಗ್ಗೆ ವಿಧಾನಸಭೆಯಲ್ಲಿ ನಡೆದ ಅರ್ಧ ತಾಸು ಕಾಲಾವಧಿಯ ಚರ್ಚೆಗೆ ಉತ್ತರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈ ವಿಷಯ ತಿಳಿಸಿದ್ದಾರೆ. ಭ್ರೂಣಹತ್ಯೆ ತಪ್ಪಿತಸ್ಥರ ವಿರುದ್ಧ ಐಪಿಎಸ್ ಸೆಕ್ಷನ್‌ಗಳನ್ನು ಹಾಕುವುದಕ್ಕೆ ಕಾಯ್ದೆ ತಿದ್ದುಪಡಿ ಅಗತ್ಯವಿದ್ದು, ಮುಂದಿನ ಅಧಿವೇಶನದಲ್ಲಿ ಸೂಕ್ತ ತಿದ್ದುಪಡಿ ಜಾರಿಗೆ ತರಲಾಗು ವುದು ಎಂದರು.
ಭ್ರೂಣಹತ್ಯೆ ತಡೆಯಬೇಕಿದ್ದರೆ ಆರೋಪಿಗಳ ಜತೆಗೆ ಇದಕ್ಕೆ ಸಹಕರಿಸುವ ಕುಟುಂಬ, ವ್ಯಕ್ತಿಗಳಿಗೂ ದಂಡನೆಯಾಗಬೇಕಿದೆ. ಐಪಿಸಿ ಅಡಿ ಪ್ರಕರಣ ದಾಖಲಿಸಿದಾಗ ಮಾತ್ರ ಭಯ ಸೃಷ್ಟಿಯಾಗುತ್ತದೆ. ಹಿಂದೆ ಸೆಕ್ಷನ್ 312ರ ಅನ್ವಯ ಪ್ರಕರಣ ದಾಖಲಿಸಲಾಗುತ್ತಿತ್ತು. ಇದರಿಂದ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯುತ್ತಿದ್ದಾರೆ. ಸೆಕ್ಷನ್ 315, 316ರ ಅನ್ವಯ ಪ್ರಕರಣ ದಾಖಲಿಸಲು ಈಗ ಸೂಚನೆ ನೀಡಲಾಗಿದ್ದು, 302 ಅನ್ವಯ ಪ್ರಕರಣ ದಾಖಲಿಸಲು ಕಾಯ್ದೆ ತಿದ್ದುಪಡಿ ಅಗತ್ಯವಿದೆ. ಕಾನೂನು ಇಲಾಖೆ ಜತೆ ಸೇರಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರ ನೀತಿ ರೂಪಿಸಲಾಗುವುದು ಎಂದು ವಿವರಿಸಿದರು.
ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಬೇಕೆಂದು ವಿಪಕ್ಷ ನಾಯಕ ಆರ್. ಅಶೋಕ್ ನೀಡಿದ ಸಲಹೆಯನ್ನು ಸಚಿವರು ಪುರಸ್ಕರಿಸಿಲ್ಲ.