Advertisement

Vikram Gowda: ಹೊಟೇಲ್‌ ಸಪ್ಲಾಯರ್‌ ಆಗಿದ್ದಾಗ ನಕ್ಸಲ್‌ ಸಂಪರ್ಕ

03:37 AM Nov 21, 2024 | Team Udayavani |

ಉಡುಪಿ: ನಕ್ಸಲ್‌ ಸಿದ್ಧಾಂತದತ್ತ ವಾಲುವ ಮೊದಲು ವಿಕ್ರಂ ಗೌಡ ಮುಖ್ಯವಾಗಿ ಮಂಗಳೂರು ಮತ್ತು ಹೆಬ್ರಿಯಲ್ಲಿ ಹೊಟೇಲ್‌ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

Advertisement

ಮೊದಲು ಮಂಗಳೂರಿನ ಹೊಟೇಲ್‌ ಒಂದರಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದ. ಅನಂತರ ಹೆಬ್ರಿಯ ಹೊಟೇಲ್‌ನಲ್ಲಿ ಸಪ್ಲಾಯರ್‌ ಆಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭ ಬೇರೆ ಬೇರೆಯವರಿಗೆ ಹೊಟೇಲ್‌ನಿಂದ ಆಹಾರ ಪಾರ್ಸೆಲ್‌ ಕೊಂಡೊಯ್ಯುತ್ತಿದ್ದ. ಇದೇ ವೇಳೆ ನಕ್ಸಲ್‌ ಸಿದ್ಧಾಂತದ ವ್ಯಕ್ತಿಗಳ ಪರಿಚಯ ಆಗಿತ್ತು. ಕ್ರಮೇಣ ಅವರ ಜತೆ ಸೇರಿ ಊರು ಬಿಟ್ಟಿದ್ದ ಎಂದು ತಿಳಿದುಬಂದಿದೆ.

8 ದಿನ ಮುಂಬಯಿಯಲ್ಲಿದ್ದ
ವಿಕ್ರಂ ಗೌಡನ ತಂಗಿ ಸುಗುಣಾ ಪತಿಯ ಜತೆ 10 ವರುಷ ಕಾಲ ಮುಂಬಯಿಯಲ್ಲಿ ವಾಸವಿದ್ದರು. ಈ ವೇಳೆ ವಿಕ್ರಂ ಗೌಡ ಮುಂಬಯಿಯ ತಂಗಿ-ಭಾವನ ಮನೆಗೆ ಹೋಗಿ ಬರುತಿದ್ದ. ಅಲ್ಲಿ ಉದ್ಯೋಗಕ್ಕೆ ಸೇರಿರಲಿಲ್ಲ. ಎಂಟು ದಿನ ಮಾತ್ರ ಅಲ್ಲಿ ವಾಸ್ತವ್ಯವಿದ್ದ ಎಂದು ಮನೆಯ ಮೂಲಗಳು ತಿಳಿಸಿವೆ. ಕಿರಿಯ ಸಹೋದರ ಸುರೇಶ್‌ ಗೌಡ ತಂಗಿ ಜೊತೆ ಮುಂಬಯಿಯಲ್ಲಿ ಹೊಟೇಲಿನಲ್ಲಿ ಕೆಲಸ ಮಾಡಿ ಊರಿಗೆ ಮರಳಿ ಹೆಬ್ರಿ ಹೊಟೇಲಿಗೆ ಸೇರಿದ್ದು, ಪ್ರಸ್ತುತ ಹೆಬ್ರಿ ಪರಿಸರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ.

ವಿಕ್ರಂನ ಶವ ಸಾಗಿಸಿದ್ದು ಗೆಳೆಯ
ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಆಸ್ಪತ್ರೆಯಿಂದ ಆತನ ಶವ ಸಾಗಾಟ ಮಾಡಿದ ಆ್ಯಂಬುಲೆನ್ಸ್‌ ಚಾಲಕ ವಿಕ್ರಂನ ಜತೆ ಮಂಗಳೂರಿನ ಹೊಟೇಲಿನಲ್ಲಿ ಜತೆಯಾಗಿ ಕೆಲಸ ಮಾಡಿಕೊಂಡಿದ್ದವರು.

ವಿಕ್ರಂಗೆ ಆರೋಗ್ಯ ಸಮಸ್ಯೆ ಇತ್ತೇ?
ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. 46ರ ಹರೆಯದ ವಿಕ್ರಂ ಗೌಡ ಹಿಂದೊಮ್ಮೆ ಗಟ್ಟಿಮುಟ್ಟಾಗಿದ್ದ ಮಾಹಿತಿ ಇತ್ತು. ಆದರೆ ಈಗ ತುಂಬ ಸಣಕಲು ಆಗಿರುವುದನ್ನು ಬುಧವಾರ ಅಂತ್ಯಕ್ರಿಯೆಯ ವೇಳೆ ಸ್ಥಳೀಯರು ಗಮನಿಸಿದ್ದಾರೆ. ಈ ಸ್ಥಿತಿಯಲ್ಲಿ ಪೀತಬೈಲು ಎಂಬ ಕಾಡಂಚಿನ ಗ್ರಾಮೀಣ ಪ್ರದೇಶ ಸಹಿತ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಈತ ಹೇಗೆ ಓಡಾಡುತ್ತಿದ್ದ ಎಂಬುದೇ ಕುತೂಹಲಕಾರಿ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next