Advertisement

ಭಗವಾನ್‌ ವಿರುದ್ಧ ಸಾಗರ ಠಾಣೆಗೆ ದೂರು

10:31 AM Dec 31, 2018 | Team Udayavani |

ಸಾಗರ: ಶ್ರೀರಾಮ, ಸೀತೆ ಮತ್ತು ಹಿಂದೂ ಧರ್ಮದ ನಂಬಿಕೆಗಳ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸಾಹಿತಿ ಭಗವಾನ್‌ ವಿರುದ್ಧ ಇಲ್ಲಿನ ನಗರ ಠಾಣೆಗೆ ಶನಿವಾರ ಪೊಲೀಸ್‌ ದೂರು ನೀಡಲಾಗಿದೆ.  ಹಳೆ ಇಕ್ಕೇರಿ ವಾಸಿ ಮಹಾಬಲೇಶ್ವರ ಬಿನ್‌ ಬಿ. ಶ್ರೀಧರ್‌ ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗದಳ ನೇತೃತ್ವದಲ್ಲಿ ಭಗವಾನ್‌ ವಿರುದ್ಧ ದೂರು ದಾಖಲಿಸಿದ್ದಾರೆ.

Advertisement

ಸಾಹಿತಿ ಭಗವಾನ್‌ ಅವರ “ರಾಮಮಂದಿರ ಏಕೆ ಬೇಡ’ ಕೃತಿಯ ಎರಡನೇ ಅಧ್ಯಾಯದಲ್ಲಿ ರಾಮಾಯಣ, ಸೀತೆ ಮತ್ತು ಹಿಂದೂಧರ್ಮದ ನಂಬಿಕೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ. ಶ್ರೀರಾಮ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಧರ್ಮಕಾರ್ಯದದಲ್ಲಿ ತೊಡಗಿರುತ್ತಿದ್ದ. ಮಧ್ಯಾಹ್ನದ ಮೇಲಿನ ಕಾಲವನ್ನು ಅಂತಃಪುರದಲ್ಲಿ ಕಳೆಯುತ್ತಿದ್ದ. ಸೀತೆಯ ಜೊತೆ ಮಧು ಮೈರೇಯಕಂ ಎಂಬ ಮದ್ಯ ಸೇವಿಸುತ್ತಿದ್ದ. ಮಾಂಸ ಸೇವನೆ ಮಾಡುತ್ತಿದ್ದ. ಅಲ್ಲದೆ ನಿತ್ಯಗೀತೆಗಳಲ್ಲಿ ಪರಿಣಿತರಾದ ಹುಡುಗಿಯರು, ವನಿತೆಯರು ಪಾನಮತ್ತರಾಗಿ ರಾಮನ ಎದುರು ನರ್ತಿಸುತ್ತಿದ್ದರು ಎಂದೆಲ್ಲ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 

ಧರ್ಮವಂತ, ವಿನೋದಪ್ರಿಯ ಪರಮಭೂಷಿತನಾದ ರಾಮ ಆ ಸ್ತ್ರೀಯರನ್ನು ಸಂತೋಷಪಡಿಸಿದನು. ರಾಮ ಎಂದೂ ಏಕಪತ್ನಿ ವ್ರತಸ್ಥನಾಗಿರಲಿಲ್ಲ. ಅದೆಲ್ಲಾ ಕಟ್ಟುಕಥೆ ಎನಿಸುತ್ತದೆ. ಅಲ್ಲದೆ ರಾಮ ಸಾಮಾನ್ಯ ವ್ಯಕ್ತಿಯಂತೆ ಮದಿರೆ ಮತ್ತು ಮಾನಿನಿಯರಲ್ಲಿ ಮೈಮರೆಯುತ್ತಿದ್ದು, ಅವನು ಸತ್ಯವಂತನಲ್ಲ, ವೀರನೂ ಅಲ್ಲ. ಗರ್ಭಿಣಿ ಪತ್ನಿಯನ್ನು ಕಾಡಿನಲ್ಲಿ ಬಿಟ್ಟು ಮೋಸ ಮಾಡಿದ್ದಾನೆ. 

ರಾಮನಿಗೆ ಒಳ್ಳೆಯ ಚಾರಿತ್ರ್ಯ ಇಲ್ಲ. ರಾಮನು ಭೋಗದ ಜೀವನ ನಡೆಸುತ್ತಿದ್ದ ಎಂಬಿತ್ಯಾದಿಯಾಗಿ ಸಾಹಿತಿ ಭಗವಾನ್‌ ಬರೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಲ್ಲದೆ ಭಗವಾನ್‌ ಅವರು ಈ ಪುಸ್ತಕದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನೂ ಸಹ ಒಬ್ಬ ಮತಾಂಧ ಎಂದು ಬರೆದಿದ್ದಾರೆ. ಭಗವಾನ್‌ ಅವರು ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಧರ್ಮ ಮತ್ತು ನಂಬಿಕೆ ವಿರುದ್ಧ ನಿರಂತರ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಅಲ್ಲದೆ ತಮ್ಮ ಕೃತಿಯಲ್ಲೂ
ಸಹ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. 

Advertisement

ಮಾಪು ಇಕ್ಕೇರಿ, ಕುಮಾರ್‌, ಕೆ.ವಿ. ಪ್ರವೀಣ್‌, ಶ್ರೀಧರ ಸಾಗರ, ರಾಮು, ಅರುಣ್‌, ಮಹೇಶ್‌, ರಾಜು ಬಿ. ಮಡಿವಾಳ, ಸಂತೋಷ್‌ ಕೆ.ಜಿ., ರವಿಶೆಟ್ಟಿ, ಕಿರಣ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next