ಬೆಂಗಳೂರು: ‘ಕೆಜಿಎಫ್’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾದಲ್ಲಿ ತನ್ನ ಅಭಿಮಾನ ಸಾಮ್ರಾಜ್ಯವನ್ನು ಕಟ್ಟಿದ ಯಶ್ (Actor Yash) ಇಂದು ದಕ್ಷಿಣ ಭಾರತದ ಬಹುದೊಡ್ಡ ನಟರಲ್ಲಿ ಒಬ್ಬರು.
ಇಂದು ಅವರನ್ನು ವರ್ಲ್ಡ್ ಸಿನಿಮಾ ಗುರುತಿಸುತ್ತದೆ ಎಂದರೆ ಅದಕ್ಕೆ ಕಾರಣ ‘ಕೆಜಿಎಫ್’ ನಲ್ಲಿನ ‘ರಾಕಿ’ ಎಂದರೆ ತಪ್ಪಾಗದು.
ಯಶ್ ‘ಟಾಕ್ಸಿಕ್’ ಸಿನಿಮಾ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಹೊರತುಪಡಿಸಿ ಅವರ ಹೆಸರು ಬಹುಕೋಟಿ ನಿರ್ಮಾಣದ ‘ರಾಮಾಯಣ’ (Ramayana) ದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಈ ಸಿನಿಮಾದಲ್ಲಿ ಯಶ್ ‘ರಾವಣ’ ಮಾತ್ರವಲ್ಲದೆ ಸಹ ನಿರ್ಮಾಪಕರಾಗಿಯೂ ಜವಾಬ್ದಾರಿ ವಹಿಸಿಕೊಂಡಿರುವುದು.
‘ರಾಮಾಯಣ’ ಸಿನಿಮಾ ಹಾಗೂ ‘ರಾವಣ’ ಪಾತ್ರದ ಬಗ್ಗೆ ಯಶ್ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಮ್ಯಾಗಜೀನ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅನುಪಮಾ ಚೋಪ್ರಾ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ‘ರಾಮಾಯಣ’ ಕ್ಕೆ ಸಹ ನಿರ್ಮಾಪಕ ಆಗಿದ್ದೇಕೆ ಹಾಗೂ ‘ರಾವಣ’ ಪಾತ್ರ ಮಾಡಲು ಒಪ್ಪಿಕೊಂಡದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.
‘ಟಾಕ್ಸಿಕ್’ ಚಿತ್ರದ ವಿಎಫ್ ಎಕ್ಸ್ ಕೆಲಸದ ಸಂಬಂಧ ನಾನು ಲಾಸ್ ಏಂಜಲೀಸ್ ಗೆ ಹೋಗಿ ಕೆಲ ಸಮಯ ಇದ್ದೆ. ಇದರ ಕೆಲಸಕ್ಕೆ ಅಲ್ಲಿನ ಡಿಎನ್‌ಇಜಿ ಮತ್ತು ಪ್ರೈಮ್ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಭೇಟಿ ಆಗಿದ್ದೆ. ಈ ಭೇಟಿ ಸಂದರ್ಭದಲ್ಲಿ ನಮಿತ್ ಅವರು ನನ್ನ ಜೊತೆ ‘ರಾಮಾಯಣ’ ಸಿನಿಮಾದ ವಿಚಾರವನ್ನು ಹಂಚಿಕೊಂಡರು. ಹಲವಾರು ವರ್ಷಗಳಿಂದ ‘ರಾಮಾಯಣ’ಕ್ಕೆ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು.
ನಮಿತ್ ಅವರೊಂದಿಗಿನ ಮೊದಲ ಭೇಟಿಯಲ್ಲೇ ಅವರ ಆಲೋಚನೆ ಹಾಗೂ ನನ್ನ ಆಲೋಚನೆ ಎರಡು ಒಂದೇ ಎನ್ನುವ ಭಾವನೆ ಬಂತು. ಇದೇ ಕಾರಣಕ್ಕೆ ನಾನು ಈ ಚಿತ್ರದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.
ಇನ್ನು ‘ರಾವಣ’ ಪಾತ್ರವನ್ನು ಒಪ್ಪಿಕೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂಜರಿಕೆಯಿಂದಲೇ ನಮಿತ್ ನನ್ನ ಹತ್ರ ನೀವು ಚಿತ್ರದಲ್ಲಿ ‘ರಾವಣ’ನ ಪಾತ್ರವನ್ನು ಮಾಡಬಹುದೇ ಎಂದು ಕೇಳಿದರು. ಪಾತ್ರವನ್ನು ಪಾತ್ರದಂತೆ ಪರಿಗಣಿಸಿದರೆ, ಇಂದು ಈ ಚಿತ್ರ ಆಗದಿದ್ದರೆ ಮುಂದೆ ಆಗುವುದಿಲ್ಲ ಎಂದು ಹೇಳಿದ್ದೆ. ಇಂತಹ ಸಿನಿಮಾಕ್ಕೆ ಸ್ಟಾರ್ ಡಮ್ ಎನ್ನುವುದನ್ನು ಪಕ್ಕಕ್ಕಿಟ್ಟು ಎಲ್ಲರೂ ಕೈಜೋಡಿಸಬೇಕು. ಯೋಜನೆಗಳನ್ನು ರೂಪಿಸಬೇಕೆಂದು ಅವರ ಬಳಿ ಹೇಳಿದ್ದೆ ಎಂದು ಯಶ್ ಹೇಳಿದ್ದಾರೆ.
ನಾನು ಈ ಚಿತ್ರದ ಭಾಗವಾಗುವ ಮುನ್ನವೇ ‘ರಾಮ’ನ ಪಾತ್ರಕ್ಕೆ ರಣ್ಬೀರ್ ಕಪೂರ್ ಅವರ ಆಯ್ಕೆ ನಡೆದು ಹೋಗಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ‘ಸೀತೆ’ಯ ಪಾತ್ರಕ್ಕೆ ಸಾಯಿಪಲ್ಲವಿ ಅವರನ್ನು ಆಯ್ಕೆ ಮಾಡುವ ಇಚ್ಛೆ ಇತ್ತು. ಹಾಗಾಗಿ ಸಾಯಿಪಲ್ಲವಿ ಈ ಪಾತ್ರಕ್ಕೆ ಆಯ್ಕೆ ಆದರು ಎಂದಿದ್ದಾರೆ.
ರಾವಣನ ಪಾತ್ರ ಬಿಟ್ಟು ಬೇರೆ ಯಾವ ಪಾತ್ರವನ್ನು ಮಾಡುತ್ತಿದ್ದೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ‘ರಾವಣ’ನ ಪಾತ್ರ ಹೊರತುಪಡಿಸಿ ಬೇರೆ ಯಾವ ಪಾತ್ರವಿದ್ದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆ ಪಾತ್ರಕ್ಕೆ ಜೀವ ತುಂಬುವುದೇ ಒಂದು ರೋಚಕ ಅನುಭವ. ಅದಕ್ಕಾಗಿ ತುಂಬಾ ಎಕ್ಸೈಟ್ ಆಗಿದ್ದೇನೆ. ಈ ರಾಮಾಯಣ ಎಲ್ಲರಿಗೂ ವಿಶಿಷ್ಟ ಅನುಭವ ನೀಡಲಿದೆ ಎಂದು ಯಶ್ ಹೇಳಿದ್ದಾರೆ.